ಮತ್ತೊಂದು ಚುನಾವಣೆ

ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮೂರು ಮಹಾನಗರ ಪಾಲಿಕೆ ಸೇರಿ 108 ಸ್ಥಳೀಯ ಸಂಸ್ಥೆ ಚುನಾವಣೆಗೆ ಇದೇ ವಾರದಲ್ಲಿ ಮುಹೂರ್ತ ನಿಗದಿಯಾಗುವ ಸಾಧ್ಯತೆ ದಟ್ಟವಾಗಿದೆ. ನ್ಯಾಯಾಲಯದ ಸೂಚನೆಯಂತೆ ಸರ್ಕಾರ ಎರಡು ದಿನಗಳಲ್ಲಿ ವಾರ್ಡ್​ವಾರು ಮೀಸಲಾತಿ ಪಟ್ಟಿಯನ್ನು ಸಲ್ಲಿಸಲಿದ್ದು, ಒಂದೆರಡು ದಿನಗಳಲ್ಲಿ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಲಿದೆ.

ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರಪಾಲಿಕೆ ಸಹಿತ 108 ಸ್ಥಳೀಯ ಸಂಸ್ಥೆಗಳ ಅವಧಿ ಸೆಪ್ಟೆಂಬರ್​ಗೆ ಅಂತ್ಯವಾಗಲಿದೆ. ಬಿಬಿಎಂಪಿ ಬಿಟ್ಟು ಉಳಿದ ಸಂಸ್ಥೆಗಳ ಅವಧಿ ಡಿಸೆಂಬರ್ ಹಾಗೂ ಜನವರಿಯಲ್ಲಿ ಕೊನೆಯಾಗುತ್ತದೆ. ಆದ್ದರಿಂದಲೇ ಸ್ಥಳೀಯ ಸಂಸ್ಥೆಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಬೇಕಾಗಿದೆ.

ಎಲ್ಲ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಮರು ವಿಂಗಡಣೆ ಕಾರ್ಯವನ್ನು ಪೂರ್ಣಗೊಳಿಸಿರುವ ರಾಜ್ಯ ಸರ್ಕಾರ, ವಾರ್ಡ್ ವಾರು ಮೀಸಲಾತಿಯ ಕರಡು ಸಿದ್ಧಪಡಿಸಿದೆ.

ಮೀಸಲಾತಿ ತಡವಾಗುತ್ತಿದೆ ಎಂಬ ಕಾರಣಕ್ಕೆ ಆಯೋಗ ನ್ಯಾಯಾಲಯದ ಮೊರೆ ಹೋಗಿತ್ತು. ಮೊದಲ ವಾರದಲ್ಲಿಯೇ ಮೀಸಲಾತಿ ಪಟ್ಟಿ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತ್ತು. ಆದರೂ ಇನ್ನೂ ಪಟ್ಟಿ ಬಂದಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಲು ಆಯೋಗ ಸಿದ್ಧತೆ ನಡೆಸಿರುವುದು ತಿಳಿದ ಹಿನ್ನೆಲೆಯಲ್ಲಿ ಸರ್ಕಾರ ಎರಡು ದಿನದಲ್ಲಿ ಸಲ್ಲಿಸುವುದಾಗಿ ಮಾಹಿತಿ ನೀಡಿದೆ.

ಆಯೋಗದ ಸಿದ್ಧತೆ

ರಾಜ್ಯ ಚುನಾವಣಾ ಆಯುಕ್ತರಾದ ಪಿ.ಎನ್. ಶ್ರೀನಿವಾಸಚಾರಿ, ಇತ್ತಿಚೆಗೆ ಸಿದ್ಧತೆ ಕುರಿತು ಜಿಲ್ಲಾಧಿಕಾರಿಗಳ ಜತೆ ವೀಡಿಯೊ ಸಂವಾದ ನಡೆಸಿದ್ದಾರೆ. ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ, ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನೆ ಮುಗಿದಿದೆ. ರಾಜ್ಯ ಸರ್ಕಾರ ಸಹ ಅಗತ್ಯ ಹಣಕಾಸು ಬಿಡುಗಡೆ ಮಾಡಿದೆ.

ಮೈತ್ರಿ ಕುತೂಹಲ

ರಾಜ್ಯದಲ್ಲಿ ಮೈತ್ರಿ ಏರ್ಪಟ್ಟ ಬಳಿಕ ಲೋಕಸಭಾ ಚುನಾವಣೆಯನ್ನೂ ಒಂದಾಗಿ ಎದುರಿಸಲು ಜೆಡಿಎಸ್-ಕಾಂಗ್ರೆಸ್ ಬಯಸಿವೆ. ಆದರೆ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಇನ್ನು ಸ್ಪಷ್ಟ ನಿರ್ಧಾರ ಆಗಿಲ್ಲ. ಪಕ್ಷ ಸಂಘಟನೆಗೆ ಸ್ಥಳೀಯ ಸಂಸ್ಥೆಗಳೇ ಮುಖ್ಯವಾಗಿರುವ ಕಾರಣ ಈ ಚುನಾವಣೆಯಲ್ಲಿ ಮೈತ್ರಿಯ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಎರಡು ಪಕ್ಷಗಳು ಆ ನಿಟ್ಟಿನಲ್ಲಿ ಮಾತುಕತೆ ನಡೆಸಿಲ್ಲವೆಂದು ಮೂಲಗಳು ಹೇಳುತ್ತವೆ.

ಯಾವ್ಯಾವ ಪಾಲಿಕೆ

*ಮೈಸೂರು, ಶಿವಮೊಗ್ಗ, ತುಮಕೂರು

ಎರಡನೇ ಹಂತದ ಚುನಾವಣೆ

ಇನ್ನುಳಿದ 108 ಸ್ಥಳೀಯ ಸಂಸ್ಥೆಗಳಲ್ಲಿ ಮೇಲ್ದರ್ಜೆಗೇರಿಸಿದ ಸಂಸ್ಥೆಗಳಿವೆ. ಮಾರ್ಚ್ ಮೊದಲ ವಾರದೊಳಗೆ ಈ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಾಗಿದೆ. ಆದ್ದರಿಂದ ಡಿಸೆಂಬರ್ ಅಥವಾ ಜನವರಿಯಲ್ಲಿ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ.

ಆಯೋಗದ ಕಡೆಯಿಂದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಮೀಸಲಾತಿ ಪಟ್ಟಿ ಬಂದ ಕೂಡಲೇ ವೇಳಾಪಟ್ಟಿ ಪ್ರಕಟಿಸುತ್ತೇವೆ. ಎರಡು ದಿನದಲ್ಲಿ ಮೀಸಲಾತಿ ಪಟ್ಟಿ ಬರುವ ನಿರೀಕ್ಷೆ ಇದೆ.

| ಪಿ.ಎನ್. ಶ್ರೀನಿವಾಸಾಚಾರಿ ಆಯುಕ್ತರು, ರಾಜ್ಯ ಚುನಾವಣಾ ಆಯೋಗ