ಲೋಕಲ್ ಫೈಟ್​ಗೆ ಇವಿಎಂ ಕೊರತೆ: ಪ್ರಸ್ತಾವನೆಗೆ ಕ್ಯಾರೇ ಎನ್ನದ ಸರ್ಕಾರ

| ವಿಲಾಸ ಮೇಲಗಿರಿ ಬೆಂಗಳೂರು

ಗ್ರಾಮ ಪಂಚಾಯಿತಿ ಚುನಾವಣೆಗೆ ಬೇಕಾದ ಬಹುಆಯ್ಕೆ ಇವಿಎಂಗಳಿಗೆ 95 ಕೋಟಿ ರೂ.ಗೆ ರಾಜ್ಯ ಚುನಾವಣಾ ಆಯೋಗ ಪ್ರಸ್ತಾವನೆ ಸಲ್ಲಿಸಿ 2 ವರ್ಷ ಕಳೆದರೂ ಸರ್ಕಾರ ಕ್ಯಾರೇ ಎಂದಿಲ್ಲ. ಪದೇಪದೆ ಪತ್ರ ವ್ಯವಹಾರ ನಡೆಸಿದರೂ ಅನುದಾನ ಬಿಡುಗಡೆಯಾಗಿಲ್ಲ.

ಇವಿಎಂ ಮೂಲಕ ಗ್ರಾಪಂ ಚುನಾವಣೆ ನಡೆಸಲು 43 ಸಾವಿರ ಕಂಟ್ರೋಲ್ ಯುನಿಟ್, 51 ಸಾವಿರ ಬ್ಯಾಲೆಟ್ ಯುನಿಟ್ ಬೇಕಾಗುತ್ತವೆ. ಆಯೋಗ ತನ್ನ ಬಳಿ ಇರುವ ಅಲ್ಪ-ಸ್ವಲ್ಪ ಇವಿಎಂಗಳನ್ನು ಹೊರತುಪಡಿಸಿ ಬಹುತೇಕ ಕೇಂದ್ರ ಚುನಾವಣಾ ಆಯೋಗದ ಇವಿಎಂಗಳನ್ನೇ ಬಳಸಿ ಚುನಾವಣೆ ನಡೆಸುತ್ತ ಬಂದಿದೆ. ಅದೂ 2016ಕ್ಕಿಂತ ಮುಂಚೆ ತಯಾರಿಸಿದ್ದನ್ನಷ್ಟೇ ಬಳಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಿದೆ. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಇವಿಎಂ ಬಳಸಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾಗಿದೆ.

ಹೊಸ ಇವಿಎಂ ಪ್ರಾತ್ಯಕ್ಷಿಕೆ: ಬಹು ಆಯ್ಕೆ ಇವಿಎಂಗಳಿಗೆ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕ ಡಿಸೈನ್ ಮಾಡಿಸಿದೆ. ಬಿಇಎಲ್ ಸಂಸ್ಥೆ ಈ ಡಿಸೈನ್ ಸಿದ್ಧಪಡಿಸಿದ್ದು, ಮೇ 13ರಂದು ರಾಜ್ಯ ಚುನಾವಣಾ ಆಯುಕ್ತರಿಗೆ ಪ್ರಾತ್ಯಕ್ಷಿಕೆ ನೀಡಿದೆ. ಅದೇ ರೀತಿ ರಾಷ್ಟ್ರಮಟ್ಟದಲ್ಲಿ ಬಿಇಎಲ್ ಹಾಗೂ ಇಸಿಐಸಿಗಳು ದೆಹಲಿಯ ಮಹಾರಾಷ್ಟ್ರ ಭವನದಲ್ಲಿ ಮೇ 17ರಂದು ನಾನಾ ರಾಜ್ಯಗಳ ರಾಜ್ಯ ಚುನಾವಣಾ ಆಯುಕ್ತರ ಸಭೆಯಲ್ಲಿ ಹೊಸ ಡಿಸೈನ್ ಇವಿಎಂಗಳ ಪ್ರಾತ್ಯಕ್ಷಿಕೆ ನೀಡಲಿವೆ. ನಂತರ ಐಐಟಿ-ಐಐಎಸ್​ಸಿ ಪ್ರೊಫೆಸರ್​ಗಳನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ ಈ ಯಂತ್ರಗಳನ್ನು ಪರಿಶೀಲನೆಗೆ ಒಳಪಡಿಸಿ ಖಾತ್ರಿ ಪಡಿಸಿಕೊಳ್ಳಲಾಗುತ್ತದೆ. ತದನಂತರ ಇವುಗಳನ್ನು ಬೇಕಾದ ರಾಜ್ಯಗಳು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿವೆ. ಬಹುಆಯ್ಕೆ ಇವಿಎಂಗಳು ಎಲ್ಲ ರಾಜ್ಯಗಳಿಗೂ ಒಂದೇ ರೀತಿ ಇರಲಿದ್ದು, ಬೇಕಿದ್ದರೆ ಆಯಾ ರಾಜ್ಯಗಳು ತಮ್ಮ ಲೋಗೋ ಅಳವಡಿಸಿಕೊಳ್ಳಲು ಅವಕಾಶವಿದೆ.

ಬೀದರ್​ನಲ್ಲಿ ಯಶಸ್ವಿ ಪ್ರಯೋಗ: ಕಳೆದ ವರ್ಷ ಬೀದರ್ ಜಿಲ್ಲೆಯಲ್ಲಿ ಬಿಇಎಲ್ ಸಿದ್ಧಪಡಿಸಿದ್ದ 2 ಕೋಟಿ ರೂ. ವೆಚ್ಚದ 1,200 ಬಹುಆಯ್ಕೆ ಇವಿಎಂಗಳನ್ನು ಬಳಸಿ ರಾಜ್ಯ ಚುನಾವಣಾ ಆಯೋಗ ಯಶಸ್ವಿಯಾಗಿ ಚುನಾವಣೆ ನಡೆಸಿದೆ. ಗ್ರಾಪಂಗಳಲ್ಲಿ ಬ್ಯಾಲೆಟ್ ಬಳಸಿ ಚುನಾವಣೆ ನಡೆಸಿದರೆ ಮತ ಎಣಿಕೆಗೆ ಒಂದು ದಿನ, ಕೆಲವೆಡೆ 2 ದಿನ ಬೇಕಾಗುತ್ತಿತ್ತು. ಇವಿಎಂ ಬಳಕೆಯಿಂದ ಬಹುತೇಕ ಅಪರಾಹ್ನ ಫಲಿತಾಂಶ ಪ್ರಕಟಗೊಂಡಿತ್ತು. ಈ ಬಹು ಆಯ್ಕೆ ಇವಿಎಂಗಳನ್ನು ಈಗಾಗಲೇ ಕೇರಳ, ಮಧ್ಯಪ್ರದೇಶ ರಾಜ್ಯಗಳು ಪಡೆದಿವೆ. ಗ್ರಾಪಂ ಅಲ್ಲದೆ, ಬೇರೆ ಬೇರೆ ಚುನಾವಣೆಗೂ ಇವನ್ನು ಬಳಸಬಹುದು.

ಒಟ್ಟಿಗೆ ಖರೀದಿ ಕಷ್ಟ: ಇವಿಎಂಗಳ ಖರೀದಿ ರಾಜ್ಯಕ್ಕೆ ಹೊರೆ ಆಗಬಾರದೆಂದು 3-4 ರಾಜ್ಯಗಳು ಸೇರಿ ಒಟ್ಟಿಗೆ ಖರೀದಿಸಿ ಬಳಕೆಯ ಪ್ರಯೋಗ ಕೂಡ ನಡೆದಿತ್ತು. ಒಂದೆರಡು ರಾಜ್ಯ ಗಳಲ್ಲಿ ಏಕಕಾಲಕ್ಕೆ ಚುನಾವಣೆ ಎದುರಾದರೆ ಕಷ್ಟ. ನ್ಯಾಯಾಲಯ ಮತ್ತಿತರ ಕಾರಣಗಳಿಗಾಗಿ ಚುನಾವಣೆ ತರುವಾಯದ 6 ತಿಂಗಳು ಈ ಯಂತ್ರಗಳನ್ನು ಬೇರೆ ಚುನಾವಣೆಗೆ ಬಳಸಲು ಅವಕಾಶ ಇರುವುದಿಲ್ಲ. ಹಾಗಾಗಿ 3-4 ರಾಜ್ಯಗಳು ಒಟ್ಟಿಗೆ ಸೇರಿ ಬಹುಆಯ್ಕೆ ಇವಿಎಂ ಖರೀದಿ ಸಾಧ್ಯವಿಲ್ಲ ಎಂಬ ಅಭಿಪ್ರಾ ಯಕ್ಕೆ ಬರಲಾಗಿದೆ. ಕಾರಣ ಆಯಾ ರಾಜ್ಯಗಳು ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಸ್ವಂತ ಇವಿಎಂ ಖರೀದಿಸಬೇಕಾದ ಅನಿ ವಾರ್ಯತೆ ಇದೆ. ಇದನ್ನು ರಾಜ್ಯ ಸರ್ಕಾರ ಗಂಭಿರವಾಗಿ ಪರಿಗಣಿಸಬೇಕಿದೆ.

ಅವಶ್ಯ ಇರುವ ಇವಿಎಂಗಳು

ನಗರ ಸ್ಥಳೀಯ ಸಂಸ್ಥೆ

  • 24 ಸಾವಿರ ಕಂಟ್ರೋಲ್ ಯುನಿಟ್
  • 25 ಸಾವಿರ ಬ್ಯಾಲೆಟ್ ಯುನಿಟ್
  • 3 ಕೋಟಿ ರೂ. ಅನುದಾನ

ಗ್ರಾಮ ಪಂಚಾಯಿತಿ

  •  43,000 ಕಂಟ್ರೋಲ್ ಯುನಿಟ್
  •  51,000 ಬ್ಯಾಲೆಟ್ ಯುನಿಟ್
  •  95 ಕೋಟಿ ರೂ. ಅನುದಾನ

ಜಿಲ್ಲಾ ಪಂಚಾಯಿತಿ (ಈಗ ಇರುವುದನ್ನು ಬಿಟ್ಟು)

  •  56 ಸಾವಿರ ಕಂಟ್ರೋಲ್ ಯುನಿಟ್
  •  45 ಸಾವಿರ ಬ್ಯಾಲೆಟ್ ಯುನಿಟ್
  •  106 ಕೋಟಿ ರೂ. ಅನುದಾನ

Leave a Reply

Your email address will not be published. Required fields are marked *