ಪಕ್ಷಗಳ ಬಲಾಬಲ ನಡುವೆ ಇತರರೂ ಪ್ರಬಲ

ಗದಗದಲ್ಲಿ ಪಕ್ಷಕ್ಕಿಂತ ವ್ಯಕ್ತಿ, ಜಾತಿ ಪ್ರಮುಖ

| ಮೃತ್ಯುಂಜಯ ಕಲ್ಮಠ ಗದಗ

ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲವಾದರೂ, ರಾಷ್ಟ್ರೀಯ ಪಕ್ಷಗಳ ಟಿಕೆಟ್ ವಂಚಿತರಾದವರು ತೆನೆ ಹೊತ್ತು ತ್ರಿಕೋನ ಸ್ಪರ್ಧೆ ಸೃಷ್ಟಿಸಿದ್ದಾರೆ. ಹಲವಡೆ ಪಕ್ಷೇತರರ ಹವಾ ಕೂಡ ಜೋರಾಗಿದೆ. ಪಕ್ಷಕ್ಕಿಂತ ವ್ಯಕ್ತಿ ಮತ್ತು ಜಾತಿ ಇಲ್ಲಿ ಪ್ರಮುಖ ಪಾತ್ರ ವಹಿಸತೊಡಗಿದೆ. 9 ಸ್ಥಳೀಯ ಸಂಸ್ಥೆಗಳ ಪೈಕಿ 6ಕ್ಕೆ ಚುನಾವಣೆ- ಗಜೇಂದ್ರಗಡ 23, ರೋಣ 23, ಲಕ್ಷೆ್ಮೕಶ್ವರ 23, ಶಿರಹಟ್ಟಿ 18, ನರೇಗಲ್ 17 ಮತ್ತು ಮುಳಗುಂದ ಪಪಂ 19 ಸೇರಿ ಒಟ್ಟು 123 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ನರಗುಂದ, ರೋಣ ಮತ್ತು ಶಿರಹಟ್ಟಿ ಕ್ಷೇತ್ರಗಳಲ್ಲಿ ಬಿಜೆಪಿ ಜಯಿಸಿದೆ. ಗದಗದಲ್ಲಿ ಕಾಂಗ್ರೆಸ್ ಗೆದ್ದಿದೆ. ಹೀಗಾಗಿ, ಜಿಲ್ಲೆಯಲ್ಲಿ ಕಮಲದ ಗಾಳಿ ಭರ್ಜರಿಯಾಗಿ ಬೀಸತೊಡಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಸದ ಶಿವಕುಮಾರ ಉದಾಸಿ ಬೂತ್​ವುಟ್ಟದಲ್ಲಿ ಕಾರ್ಯಾಚರಣೆ ಆರಂಭಿಸಿರುವುದು ಕಾಂಗ್ರೆಸ್​ಗೆ ಬಿಸಿ ತುಪ್ಪವಾಗಿದೆ. ವಿಧಾನಸಭೆ ಸೋಲಿನಿಂದ ಕಂಗೆಟ್ಟು ಮಂಕಾಗಿರುವ ಕೈ ಪಡೆಗೆ ಈ ಚುನಾವಣೆಯಲ್ಲಿ ಗೆದ್ದರೆ ಕೊಂಚ ಟಾನಿಕ್ ಲಭಿಸಬಹುದು.

ಗೆಲ್ಲುವವರಿಗೆ ಮಾತ್ರ ಟಿಕೆಟ್

ಮುಳಗಂದ ಪಪಂಯಲ್ಲಿ ಕಾಂಗ್ರೆಸ್​ನದ್ದೇ ಪಾರುಪತ್ಯ. ಸ್ಥಳೀಯ ಕೈ ಮುಖಂಡರಾದ ಸಿ.ಬಿ. ಬಡ್ನಿ, ಆರ್.ಎನ್. ದೇಶಪಾಂಡೆ ಪ್ರಭಾವದಿಂದ ಅನ್ಯ ಪಕ್ಷಗಳ ಆಟ ಇಲ್ಲಿವರೆಗೆ ನಡೆದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಮಲ ಹೆಜ್ಜೆ ಇರಿಸಿದ್ದು, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಸರ್ವೆ ಮಾಡಿಸಿ ಟಿಕೆಟ್ ಹಂಚಿಕೆ ಮಾಡಿದ್ದು ವರ್ಕಟ್ ಆಗುವ ಸಾಧ್ಯತೆ ಹೆಚ್ಚಿದೆ. ಗೆಲ್ಲುವ ಸಾಮರ್ಥ್ಯ ಇರುವವರಿಗೆ ಟಿಕೆಟ್ ನೀಡಿರುವುದರಿಂದ ಕಾಂಗ್ರೆಸ್-ಬಿಜೆಪಿ ಸಮಬಲ ಸಾಧಿಸಿದ್ದು, ಕಮಲ ಅರಳಿದರೂ ಅಚ್ಚರಿಯಿಲ್ಲ.

ಹೊಂದಾಣಿಕೆ ರಾಜಕೀಯ

ಕಳೆದ ಅವಧಿಯಲ್ಲಿ ಅತಂತ್ರವಾಗಿದ್ದರಿಂದ ಲಕ್ಷೆ್ಮೕಶ್ವರ ಪುರಸಭೆಯಲ್ಲಿ ಈ ಸಲ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಲು ಬಿಜೆಪಿ-ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸಿವೆ. ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಗೆಲ್ಲುವ ಕಡೆಗೆ ಬಿಜೆಪಿಗೆ ಅನುಕೂಲ ಮಾಡುವುದು. ಬಿಜೆಪಿ ಗೆಲ್ಲುವ ಕಡೆಗೆ ಕಾಂಗ್ರೆಸ್​ಗೆ ಪೂರಕವಾಗುವಂತೆ ಅಭ್ಯರ್ಥಿಗಳನ್ನು ಕಣದಲ್ಲಿರುವಂತೆ ಮಾಡುವ ಕೆಟ್ಟ ರಾಜಕೀಯ ಸಂಪ್ರದಾಯ ಇಲ್ಲಿದ್ದು, ಅದು ಈ ಚುನಾವಣೆಯಲ್ಲೂ ಮುಂದುವರಿದಿದೆ.

ಅಹಿಂದ ವರ್ಸಸ್ ಅಭಿವೃದ್ಧಿ

ಶಿರಹಟ್ಟಿ ಪಪಂಯಲ್ಲಿ ಕಳೆದ ಸಲ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಆಡಳಿತ ನಡೆಸಿದ್ದವು. ಈ ಸಲ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಅಹಿಂದ ಮತಗಳು ಹೆಚ್ಚಿರುವುದರಿಂದ ಕಾಂಗ್ರೆಸ್ ಕೊಂಚ ಆತ್ಮವಿಶ್ವಾಸದಿಂದ ಬೀಗುತ್ತಿದೆಯಾದರೂ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತ ಗಳಿಸಿತ್ತು. ಹಿಂದೆ ಜೆಡಿಎಸ್​ನಲ್ಲಿದ್ದ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಬಿಜೆಪಿ ಸೇರ್ಪಡೆ, ಸಂಸದ ಶಿವಕುಮಾರ ಉದಾಸಿ ಅಭಿವೃದ್ಧಿ ಕಾರ್ಯ ಕಮಲ ಪಾಳೆಯದಲ್ಲಿ ಗೆಲುವಿನ ಸಾಧ್ಯತೆ ಹೆಚ್ಚಿಸಿದೆ. ಕೆಲ ವಾರ್ಡ್​ಗಳಲ್ಲಿ ಮಾತ್ರ ಜೆಡಿಎಸ್ ಸ್ಪರ್ಧಿಸಿದೆ.

ಪೂರ‘ಕೈ’ ವಾತಾವರಣವಿಲ್ಲ

ನರೇಗಲ್ ಪಪಂಯಲ್ಲಿ ಕಳೆದ ಸಲ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದು ಅಧಿಕಾರ ನಡೆಸಿದ ಕಾಂಗ್ರೆಸ್​ಗೆ ಸದ್ಯ ಪೂರಕ ವಾತಾವರಣವಂತೂ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಕಮಲ ಪಾಳೆಯದಲ್ಲಿ ಹುಮ್ಮಸ್ಸು ಹೆಚ್ಚಿದೆ. ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕೆಂದು ಕೈ ಮುಖಂಡರು, ಮಾಜಿ ಶಾಸಕ ಜಿ.ಎಸ್.ಪಾಟೀಲ ಶ್ರಮಿಸುತ್ತಿದ್ದಾರೆ. ಶಾಸಕ ಕಳಕಪ್ಪ ಬಂಡಿ ನರೇಗಲ್​ನಲ್ಲಿ ಠಿಕಾಣಿ ಹೂಡಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ನೀಗಿದ ‘ಪ್ರಬಲ’ ಕೊರತೆ

ಮೂರು ದಶಕಗಳಿಂದ ರೋಣ ಪುರಸಭೆ ಕಾಂಗ್ರೆಸ್ ಭದ್ರಕೋಟೆ. ಪ್ರತಿಪಕ್ಷಗಳಿಗೆ ಇದ್ದ ಪ್ರಬಲ ಅಭ್ಯರ್ಥಿಗಳ ಕೊರತೆ, ಈ ಸಲ ನೀಗಿದಂತಿದೆ. ಬಿಜೆಪಿ ಶಾಸಕ ಕಳಕಪ್ಪ ಬಂಡಿ ಕಮಲ ಅರಳಿಸಲು ಪಣತೊಟ್ಟಿದ್ದಾರೆ. ಮಾಜಿ ಶಾಸಕ ಜಿ.ಎಸ್.ಪಾಟೀಲ ಪುತ್ರ ಮಿಥುನ್ ಪಾಟೀಲ 7ನೇ ವಾರ್ಡ್​ನಿಂದ ಸ್ಪರ್ಧಿಸಿದ್ದು, ಇವರ ವಿರುದ್ಧ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡಿರುವ ಪುರಸಭೆ ಮಾಜಿ ಅಧ್ಯಕ್ಷ ಮುತ್ತಣ್ಣ ಸಂಗಳದ ಸೆಡ್ಡು ಹೊಡೆದಿರುವುದು ಕುತೂಹಲ ಕೆರಳಿಸಿದೆ.

ಗಜೇಂದ್ರಗಡದಲ್ಲಿ ಬಂಡಿ ಬೀಳಿಸೋದಷ್ಟು ಸುಲಭವಲ್ಲ

ಶಾಸಕ ಕಳಕಪ್ಪ ಬಂಡಿ ಪ್ರಭಾವದಿಂದ ಕಳೆದೊಂದು ದಶಕದಿಂದ ಗಜೇಂದ್ರಗಡ ಪುರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿದೆ. ಕಮಲ ಕೋಟೆ ಭೇದಿಸಲು ಕಾಂಗ್ರೆಸ್ ಸಮರ್ಥರನ್ನು ಕಣಕ್ಕಿಳಿಸಿದೆ. ಸಾಕಷ್ಟು ತಾಲೀಮು ಶುರು ಮಾಡಿಕೊಂಡಿದೆ. ಶತಾಯಗತಾಯ ಅಧಿಕಾರಕ್ಕೆ ತರಬೇಕೆಂದು ಕೈ ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಕೆಲ ವಾರ್ಡ್​ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಹವಾ ಜೋರಾಗಿದೆ.


ದ.ಕ.ದಲ್ಲಿ ಕೈ-ಕಮಲ ಸಮರ

| ಪಿ.ಬಿ.ಹರೀಶ್ ರೈ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಯಾವುದೇ ಇರಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ. ಈಗ ಚುನಾವಣೆ ನಿಗದಿಯಾಗಿರುವ ಬಂಟ್ವಾಳ ಪುರಸಭೆ, ಪುತ್ತೂರು ಮತ್ತು ಉಳ್ಳಾಲ ನಗರಸಭೆಗಳಲ್ಲೂ ಕರ-ಕಮಲ ಸಮರಕ್ಕೆ ವೇದಿಕೆ ಸಜ್ಜಾಗಿದೆ.

ಕೆಲವು ವಾರ್ಡ್​ಗಳಲ್ಲಿ ಎಸ್​ಡಿಪಿಐ ಪ್ರಬಲ ಸ್ಪರ್ಧೆ ನೀಡುವ ನಿರೀಕ್ಷೆಗಳಿದ್ದು, ಜೆಡಿಎಸ್ ಸಹಿತ ಇತರ ಪಕ್ಷಗಳು ಇಲ್ಲಿ ನಗಣ್ಯ. ಸದ್ಯ ಈ ಮೂರು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ, ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಸೋತಿದೆ. ಅಧಿಕಾರ ಉಳಿಸಿಕೊಳ್ಳುವುದು ಕಾಂಗ್ರೆಸ್​ಪಾಳಯಕ್ಕೆ ಪ್ರತಿಷ್ಠೆಯಾಗಿದೆ. ಜತೆಗೆ, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮವರಾಗಿರುವುದು ಕೈಗೆ ಆನೆಬಲ. ಒಂದು ಎಂಎಲ್​ಎ ಸ್ಥಾನದಿಂದ ಏಳಕ್ಕೆ ಜಿಗಿದು ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಈ ಚುನಾವಣೆಯಲ್ಲೂ ಪಾರಮ್ಯ ಮೆರೆಯುವ ಉತ್ಸಾಹದಲ್ಲಿದೆ. ಒಟ್ಟು 89 ಸ್ಥಾನಗಳಿಗೆ 250 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ 9 ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದು ವಿಶೇಷ.

ಪುತ್ತೂರಿನಲ್ಲಿ ಭಿನ್ನಮತದ ಕಟ್ಟು!

ಪುತ್ತೂರು ನಗರಸಭೆ ಭಿನ್ನಮತಕ್ಕೆ ಕಾಂಗ್ರೆಸ್ ಕಂಗೆಟ್ಟಿದೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಬಣಗಳ ಮಧ್ಯೆ ಬಹಿರಂಗ ಸಮರ ನಡೆಯುತ್ತಿದೆ. ಬಿಜೆಪಿಗೆ ಇದು ಲಾಭ ತರುವ ನಿರೀಕ್ಷೆ ಇದೆ. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದರೂ ಅಧ್ಯಕ್ಷರ ಆಯ್ಕೆಯಲ್ಲಿ ಎಡವಿತ್ತು. ಆಬಳಿಕ ಸದಸ್ಯರು ಅನರ್ಹಗೊಂಡ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 3 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಬಹುಮತ ಪಡೆದಿತ್ತು. ಇದೀಗ ಬಿಜೆಪಿಯ ಸಂಜೀವ ಮಠಂದೂರು ಶಾಸಕರಾಗಿದ್ದಾರೆ.

 

ಕೈಗೆ ಎಸ್​ಡಿಪಿಐ ಸವಾಲು

ಬಂಟ್ವಾಳ ಪುರಸಭೆಯ 27 ವಾರ್ಡ್​ಗಳಲ್ಲಿ ಬಹುತೇಕ ಕಡೆ ಅಲ್ಪಸಂಖ್ಯಾತ ಮತದಾರರು ನಿರ್ಣಾಯಕ. ವಿಧಾನಸಭೆ ಚುನಾವಣೆಯಲ್ಲಿ ಎಸ್​ಡಿಪಿಐ ನಾಮಪತ್ರ ಹಿಂತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್​ಗೆ ಸಹಕರಿಸಿತ್ತು. ಆದರೀಗ 12 ವಾರ್ಡ್​ಗಳಲ್ಲಿ ಸ್ಪರ್ಧಿಸಿ ಕಾಂಗ್ರೆಸ್​ಗೆ ಸವಾಲೊಡ್ಡಿದೆ. ಹಿಂದೆ 3 ವಾರ್ಡ್​ಗಳಲ್ಲಿ ಎಸ್​ಡಿಪಿಐ ಜಯಿಸಿತ್ತು. ಮಾಜಿ ಸಚಿವ ರಮಾನಾಥ ರೈಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. 2013ರಲ್ಲಿ 5 ಸ್ಥಾನ ಗೆದ್ದಿದ್ದ ಬಿಜೆಪಿ ಈಗ ಶಾಸಕ ರಾಜೇಶ್ ನಾೖಕ್ ಸಾರಥ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಆತ್ಮವಿಶ್ವಾಸ ಹೊಂದಿದೆ. ಐವರು ಮುಸ್ಲಿಂ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ.

ಕಾಂಗ್ರೆಸ್ ಕೋಟೆ ಉಳ್ಳಾಲ

ಸಚಿವ ಯು.ಟಿ.ಖಾದರ್ ಪ್ರತಿನಿಧಿಸುವ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ನಗರಸಭೆಯ 31 ವಾರ್ಡ್​ಗಳಲ್ಲಿ ಅಲ್ಪಸಂಖ್ಯಾತರು ನಿರ್ಣಾಯಕರಾಗಿದ್ದು, ಕಾಂಗ್ರೆಸ್ ಸತತ ಜಯ ದಾಖಲಿಸಿದೆ. ಈ ಬಾರಿ ಎಸ್​ಡಿಪಿಐ 9 ಸ್ಥಾನಗಳಿಗೆ ಸ್ಪರ್ಧಿಸಿದೆ. ದಂಪತಿ ಸಹಿತ ನಾಲ್ವರು ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ವಿಶೇಷ. ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಗೀತಾಬಾಯಿ ಬಿಜೆಪಿ ಅಭ್ಯರ್ಥಿ. ಜೆಡಿಎಸ್, ಸಿಪಿಎಂ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಗಳು ಕಣದಲ್ಲಿದ್ದರೂ ಫಲಿತಾಂಶ ಏರುಪೇರು ಮಾಡುವಷ್ಟು ಶಕ್ತಿ ಹೊಂದಿಲ್ಲ.