More

  ಸ್ಥಳೀಯ ಅಧಿಕಾರಿಗಳಿಗೆ ಬೇಕು ಸ್ವತಂತ್ರ; ಸಿರಿಗೆರೆ ಶ್ರೀ

  ಚಳ್ಳಕೆರೆ: ಪ್ರಾಚೀನ ಧರ್ಮಶಾಸ್ತ್ರದಿಂದಲೂ ಸಾಗಿ ಬಂದಿರುವ ನೃತ್ಯ, ಸಂಗೀತ ಮತ್ತು ಯೋಗ ಅಭ್ಯಾಸಗಳನ್ನು ಪ್ರೌಢ ಶಿಕ್ಷಣ ಹಂತದಲ್ಲಿ ಅಳವಡಿಸಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿಚಾಚಾರ್ಯ ಸ್ವಾಮೀಜಿ ಹೇಳಿದರು.

  ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಟ್ರಸ್ಟ್ ನಗರದ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ, ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

  ಶಿಕ್ಷಣ ಇಲಾಖೆಯಲ್ಲಿ ಅಧಿಕಾರ ವಿಕೇಂದ್ರಿಕರಣ ಕಾಣುತ್ತಿಲ್ಲ. ಸಣ್ಣ ಸಮಸ್ಯೆಗೂ ಆಯುಕ್ತರಿಂದ ಆದೇಶ ಆಗಬೇಕು ಎನ್ನುವುದಾದರೆ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರ ಹುದ್ದೆಗಳು ಅನವಶ್ಯಕ ಅನಿಸುತ್ತದೆ. ಸ್ಥಳೀಯ ಅಧಿಕಾರಿಗಳಿಗೆ ಸ್ವತಂತ್ರ ಕೊಡಬೇಕು. ಪ್ರತಿ ವರ್ಷ ಖಾಸಗಿ ಶಾಲೆಗಳ ನವೀಕರಣ ಮತ್ತು ಭೂ ದಾಖಲೆಗಳ ಪರಿಶೀಲನೆ ಕಾರ್ಯ ಸರಳೀಕರಣಗೊಳಿಸಬೇಕು ಎಂದು ಹೇಳಿದರು.

  ಸಮಾರಂಭ ಉದ್ಘಾಟಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿ ಆಗಿದೆ. ಇಲ್ಲಿ ಸರ್ಕಾರಿ ಮತ್ತು ಖಾಸಗಿ ಎನ್ನುವ ಧೋರಣೆ ಇರದಂತೆ ಗುಣಮಟ್ಟ ಶಿಕ್ಷಣಕ್ಕೆ ಸಂಸ್ಥೆಗಳು ಶ್ರಮಿಸಬೇಕು ಎಂದರು.

  ಸರ್ಕಾರಿಯಾಗಿ 76 ಸಾವಿರ ಶಾಲಾ-ಕಾಲೇಜುಗಳಿವೆ. 1.20 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇದಕ್ಕೆ ಹೊರತಾಗಿ ಸಮಗ್ರ ಶಿಕ್ಷಣ ಕಲಿಕೆಗೆ ಅನುದಾನ ರಹಿತ ಶಾಲೆಗಳ ಪರಿಶ್ರಮ ಬಹಳ ಇದೆ ಎಂದು ತಿಳಿಸಿದರು.

  ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸಮಾಜದ ಸುಧಾರಣೆಗೆ ಗುಣಮಟ್ಟದ ಶಿಕ್ಷಣ ಜಾಗೃತಿ ಬೆಳೆಯಬೇಕಿದೆ. ಶಿಕ್ಷಣ ಸಂಸ್ಥೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕಿದೆ. ಶಿಕ್ಷಣ, ದಾಸೋಹ ಮತ್ತು ಶಿಸ್ತಿಗೆ ಹೆಸರಾಗಿರುವ ಸಿರಿಗೆರೆ ಮಠದ ಶಿಕ್ಷಣ ಸಂಸ್ಥೆಗಳನ್ನು ಅನುಸರಿಸಬೇಕಿದೆ ಎಂದು ಹೇಳಿದರು.

  ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ ಮಾತನಾಡಿದರು. ಡಿಡಿಪಿಐ ರವಿಶಂಕರ್ ರೆಡ್ಡಿ, ಬಿಇಒ ಕೆ.ಎಸ್.ಸುರೇಶ್, ಖಾಸಗಿ ಅನುದಾನ ರಹಿತ ಶಾಲಾ ಮಂಡಳಿ ತಾಲೂಕಾಧ್ಯಕ್ಷ ಯಾದಲಗಟ್ಟೆ ಜಗನ್ನಾಥ್, ಕಾರ್ಯದರ್ಶಿ ಪಿ.ದಯಾನಂದ ಪ್ರಹ್ಲಾದ್, ಡಾ.ಕೆ.ಎನ್. ಜಯಕುಮಾರ್, ಡಿ.ಟಿ.ರವೀಂದ್ರ, ಮೈಲನಹಳ್ಳಿ ಚಂದ್ರಣ್ಣ, ಕೆ.ಎಂ.ಶಿವಸ್ವಾಮಿ, ಕೆ.ಎಂ.ವೀರೇಶ್, ಚಿಕ್ಕಣ್ಣ, ಎಸ್.ರವಿ, ಡಿ.ಶಶಿಕುಮಾರ್, ಗೌರೀಶ, ಆರ್.ಶ್ರೀನಿವಾಸಚಾರ್, ಎಚ್.ಎಸ್.ರಾಜೇಶ್ ಗುಪ್ತಾ, ಎಸ್.ಟಿ. ಬೋರಸ್ವಾಮಿ, ಕೆ.ಪಿ. ನಾಗಭೂಷಣ ಮತ್ತಿತರರು ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts