More

    ಸಂಪುಟ ರಕ್ಷಣಾತ್ಮಕ ಆಟ; ಸಂಪುಟ ಸೇರಲು ರಾಜಕೀಯ ಲಾಬಿ 

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಶುರುವಾಗಿದ್ದು, ಸಂಪುಟ ಸೇರಲು ರಾಜಕೀಯ ಲಾಬಿಯೂ ತೀವ್ರಗೊಂಡಿದೆ. ಗುರುವಾರ ಅಥವಾ ಶುಕ್ರವಾರ ವಿಸ್ತರಣೆ ಕುತೂಹಲಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಟ್ಟಿ ನಿರ್ಧಾರ ಮಾಡಿದ್ದು, ಅದಕ್ಕೆ ವರಿಷ್ಠರು ಒಲ್ಲದ ಮನಸ್ಸಿನಲ್ಲಿ ಓಕೆ ಎಂದಿದ್ದಾರೆ ಎನ್ನಲಾಗಿದೆ.

    ಈ ತಿಂಗಳೊಳಗೆ ಸಂಪುಟ ವಿಸ್ತರಣೆ ಖಚಿತ ಎಂದು ಬಿಎಸ್​ವೈ ಪುನರುಚ್ಚರಿಸಿದ್ದು, ಸಚಿವಾಕಾಂಕ್ಷಿಗಳು ತುದಿಗಾಲಲ್ಲಿ ಕಾಯ್ದಿದ್ದಾರೆ. ಬುಧವಾರ ‘ರಾಜಯೋಗ’ ಪ್ರಾರಂಭವಾಗುವ ಕಾರಣ, ಸಂಪುಟ ವಿಸ್ತರಣೆಗೆ ಈಗಲೇ ಸಕಾಲ ಎನ್ನುವುದು ಮುಖ್ಯಮಂತ್ರಿಗಳ ಅಭಿಮತವಾಗಿದೆ.

    ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಡ್ಡಾ ಅವರನ್ನು ಭೇಟಿ ಮಾಡಿ ಅಭಿನಂದಿಸಲು ದೆಹಲಿಗೆ ತೆರಳಬೇಕೆಂಬ ಇಚ್ಛೆ ಹೊಂದಿರುವ ಸಿಎಂ, ಅಂದೇ ಸಂಪುಟಕ್ಕೆ ಒಪ್ಪಿಗೆ ಪಡೆದು ಬೆಂಗಳೂರಿಗೆ ಮರಳುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಗೃಹ ಸಚಿವ ಅಮಿತ್ ಷಾ ಒಪ್ಪಿಗೆ ನೀಡಿರುವ ಹಿನ್ನೆಲೆ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಿಎಂ ಚರ್ಚೆ ನಡೆಸುತ್ತಿದ್ದಾರೆ.

    ಸಂಪುಟ ವಿಸ್ತರಣೆ ಪ್ರಕ್ರಿಯೆ ಸರ್ಕಾರದ ಮೇಲೆ ಪರಿಣಾಮ ಬೀರಬಾರದು. ರಾಜಕೀಯ ಷಡ್ಯಂತ್ರಗಳಿಗೆ ವೇದಿಕೆ ಆಗಬಾರದು. ಭಿನ್ನಮತೀಯ ಬೆಳವಣಿಗೆ ಮೇಲೆ ಹದ್ದಿನ ಕಣ್ಣಿಟ್ಟು ಅದನ್ನು ನಿಭಾಯಿಸಲು ಮುಂದಾಗಬೇಕು ಎಂಬಿತ್ಯಾದಿ ಸಲಹೆಗಳನ್ನ ವರಿಷ್ಠರು ನೀಡಿರುವ ಹಿನ್ನೆಲೆಯಲ್ಲಿ ಸಿಎಂ ರಕ್ಷಣಾತ್ಮಕ ಹೆಜ್ಜೆ ಇಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡಿರುವ ಬಿಎಸ್​ವೈ, 11 ಶಾಸಕರಲ್ಲಿ ಕನಿಷ್ಠ 8 ಜನರನ್ನು ಸಚಿವರನ್ನಾಗಿ ಮಾಡಬೇಕೆಂದು ಮುಂದಾಗಿದ್ದಾರೆ. ಈ ಸಂಖ್ಯೆಯನ್ನು ಕನಿಷ್ಠ 7ಕ್ಕೆ ಇಳಿಸಿ, ಮೂಲ ಬಿಜೆಪಿಗರಿಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ವರಿಷ್ಠರು ತಾಕೀತು ಮಾಡಿದ್ದಾರೆ.

    11 ಶಾಸಕರಲ್ಲಿ ರಮೇಶ್ ಜಾರಕಿಹೊಳಿ, ಡಾ.ಸುಧಾಕರ್, ನಾರಾಯಣಗೌಡ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಶಿವರಾಮ ಹೆಬ್ಬಾರ್, ಭೈರತಿ ಬಸವರಾಜು ಅವರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಶಾಸಕರಾದ ಶ್ರೀಮಂತ ಪಾಟೀಲ್, ಆನಂದ್ ಸಿಂಗ್ ಮತ್ತು ಮಹೇಶ್ ಕುಮಠಳ್ಳಿಗೆ ಸಚಿವ ಸ್ಥಾನ ಸಿಗುವ ಖಾತರಿ ಇಲ್ಲ. ಮುಂದೆ ಸ್ಥಾನ ಕಲ್ಪಿಸುವ ಭರವಸೆ ನೀಡುವ ಸಂಭವವಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇನ್ನುಳಿದಂತೆ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ರಾಜೂಗೌಡ, ಹಾಲಾಡಿ ಶ್ರೀನಿವಾಸ್, ಅಂಗಾರ

    ಅವರಿಗೆ ಈ ಬಾರಿ ಸ್ಥಾನ ಕಲ್ಪಿಸುವ ಲೆಕ್ಕಾಚಾರ ನಡೆದಿದೆ. ವರಿಷ್ಠರು ನೀಡಿರುವ ಸಲಹೆ ಪರಿಗಣಿಸಿ, ಅದರ ಜತೆಗೆ ಅನುಭವದ ರಾಜಕೀಯ ಲೆಕ್ಕಾಚಾರ ಸೂತ್ರ ಸಿದ್ಧಪಡಿಸಿ ಕೊಂಡಿರುವ ಸಿಎಂ, ಒಂದು ಸ್ಥಾನ ಖಾಲಿ ಉಳಿಸಿಕೊಂಡು ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಅನಿವಾರ್ಯವಾದರೆ, ಆಪ್ತ ಸಚಿವರಿಗೆ ಸ್ಥಾನ ತೆರವು ಮಾಡುವಂತೆ ಸೂಚನೆ ನೀಡುವ ಸಂಭವವೂ ಇದೆ. ಒಂದೊಮ್ಮೆ 3-4 ದಿನದಲ್ಲಿ ಸಂಪುಟ ವಿಸ್ತರಣೆ ಸಾಧ್ಯವಾಗದೆ ಇದ್ದರೆ ದೆಹಲಿ ಚುನಾವಣೆ ಬಳಿಕವೇ ಅಂದರೆ ಫೆ.10ಕ್ಕೆ ಮುಂದೂಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

    ‘ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಈ ತಿಂಗಳು ಮುಗಿಯುವುದರೊಳಗೇ ಸಚಿವ ಸ್ಥಾನ ಸಿಗುವ ಭರವಸೆಯಿದೆ. ಇಷ್ಟು ದಿನ ಕಾಯ್ದಿದ್ದೇವೆ, ಇನ್ನು ಸ್ವಲ್ಪ ದಿನ ಕಾಯ್ತೇವೆ’. ಸಿದ್ದರಾಮಯ್ಯ ಬೈದಾಗಲೆಲ್ಲಾ ನನಗೆ ಒಳ್ಳೆಯದೇ ಆಗಿದೆ.

    | ಬಿ.ಸಿ.ಪಾಟೀಲ್ ಶಾಸಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts