ಹೊರೆ ಹಗುರ: ರೆಪೋ ದರ 25 ಮೂಲ ಸೂಚ್ಯಂಕ ಇಳಿಕೆ

ನವದೆಹಲಿ: ದೇಶದ ಆರ್ಥಿಕತೆಗೆ ವೇಗ ನೀಡುವ ಜತೆಗೆ ಮಧ್ಯಮ ವರ್ಗದ ಹೊರೆ ಇಳಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗುರುವಾರ ಮಹತ್ವದ ಹೆಜ್ಜೆ ಇರಿಸಿದೆ. ಸತತ ಮೂರನೇ ಬಾರಿ ರೆಪೋ ದರದಲ್ಲಿ 25 ಮೂಲಾಂಶ ಇಳಿಸಿರುವುದು ಒಂದಾದರೆ, ಡಿಜಿಟಲ್ ವಹಿವಾಟಿನ ಉತ್ತೇಜನ ಕ್ರಮವಾಗಿ ನೆಫ್ಟ್, ಆರ್​ಟಿಜಿಎಸ್ ಪಾವತಿ ಮೇಲಿನ ಶುಲ್ಕ ವಿನಾಯಿತಿ ಪ್ರಕಟಿಸಿದೆ. ಇಷ್ಟೇ ಅಲ್ಲದೆ, ಎಟಿಎಂ ಶುಲ್ಕ ಇಳಿಕೆ ಅಥವಾ ವಿನಾಯಿತಿ ನೀಡುವ ಸಂಬಂಧ ಪರಾಮರ್ಶೆ ನಡೆಸಲು ಸಮಿತಿ ರಚಿಸುವ ಮೂಲಕ ಗ್ರಾಹಕರಿಗೆ ಅನುಕೂಲವಾಗುವ ಸುಳಿವು ನೀಡಿದೆ.

9 ವರ್ಷದ ಕನಿಷ್ಠ: 25 ಮೂಲಾಂಶ ಇಳಿಸಿರುವುದರಿಂದ ಹಾಲಿ ರೆಪೋ ದರ ಶೇ.5.75ಕ್ಕೆ ತಲುಪಿದೆ. ಈ ಬದಲಾವಣೆಯನ್ನು ಗ್ರಾಹಕರಿಗೆ ವರ್ಗಾಯಿಸುವಂತೆಯೂ ಆರ್​ಬಿಐ ಸೂಚಿಸಿದೆ. ಸತತ ಮೂರನೇ ಅವಧಿಗೆ ರೆಪೋ ದರ ಇಳಿಸಿರುವುದು ದೇಶದ ಆರ್ಥಿಕತೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಹಾಗೆಯೇ ಮುಂದಿನ 3 ಅವಧಿಗೂ ರೆಪೋ ದರದಲ್ಲಿ 25 ಮೂಲಾಂಶ ಇಳಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಆಗಸ್ಟ್ 5ರಿಂದ 7ರವರೆಗೆ ಆರ್ಥಿಕ ನೀತಿ ಸಮಿತಿ ಸಭೆ ನಡೆಯಲಿದೆ. ರೆಪೋ ದರ ಇಳಿಕೆಯಿಂದ ಗೃಹ, ವಾಹನ ಸಾಲ ಬಡ್ಡಿ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಯಿದ್ದು, ಆರ್ಥಿಕ ಚೇತರಿಕೆಗೆ ಕಾರಣವಾಗಬಹುದು.

ವಿಶೇಷವಾಗಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕಟ್ಟಡ ಕಾಮಗಾರಿ, ಆಟೋಮೊಬೈಲ್ ಹಾಗೂ ಸಾರಿಗೆ ಉದ್ಯಮಕ್ಕೆ ಲಾಭದಾಯಕವಾಗುವ ನಿರೀಕ್ಷೆಯಿದೆ.

ರೆಪೋ ದರ ಇಳಿಕೆ ಹಾಗೂ ಏರಿಕೆ ಸಂಬಂಧ ಆರ್​ಬಿಐ ಹಾಗೂ ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯಗಳಿದ್ದವು. 2015ರ ನಂತರ ರೆಪೋ ದರ ಏರಿಸಿದ್ದು ಆರ್​ಬಿಐನ ಹಿಂದಿನ ಗವರ್ನರ್ ಹಾಗೂ ಸರ್ಕಾರದ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಹಣಕಾಸು ಇಲಾಖೆ ಮಾಜಿ ಅಧಿಕಾರಿ ಶಕ್ತಿಕಾಂತ್ ದಾಸ್ ಅವರನ್ನು ಆರ್​ಬಿಐ ಗವರ್ನರ್ ಹುದ್ದೆಗೆ ನೇಮಿಸಲಾಗಿತ್ತು ಎಂಬ ಮಾತುಗಳು ಕೂಡ ಕೇಳಿಬಂದಿದ್ದವು.

ಕುಸಿದ ಮಾರುಕಟ್ಟೆ: ಆರ್​ಬಿಐ ರೆಪೋ ದರ ಪ್ರಕಟಿಸಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ವರ್ಷದ ಅತಿ ದೊಡ್ಡ ಕುಸಿತವಾಗಿದೆ. ದಿನದಂತ್ಯಕ್ಕೆ ಸೆನ್ಸೆಕ್ಸ್ 553.82 ಸೂಚ್ಯಂಕ ಕುಸಿತವಾಗಿ 39,529.72 ಹಾಗೂ ನಿಫ್ಟಿ 177.9 ಸೂಚ್ಯಂಕ ಇಳಿಕೆಯಾಗಿ 11,843.8ಕ್ಕೆ ತಲುಪಿದೆ. ರೆಪೋ ದರದ ಜತೆಗೆ ಆರ್ಥಿಕ ಪ್ರಗತಿ ಹಾಗೂ ಹಣದುಬ್ಬರ ಕುರಿತ ಆರ್​ಬಿಐ ನಿರೀಕ್ಷೆ ಮಾರುಕಟ್ಟೆಯನ್ನು ಆತಂಕಕ್ಕೆ ದೂಡಿದೆ ಎನ್ನಲಾಗಿದೆ.

ಆರ್​ಟಿಜಿಎಸ್ ನೆಫ್ಟ್ ಶುಲ್ಕ ರದ್ದು

ನೆಫ್ಟ್(ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್) ಹಾಗೂ ಆರ್​ಟಿಜಿಎಸ್(ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ ಸಿಸ್ಟಮ್ ಪಾವತಿ ಮೇಲಿನ ಶುಲ್ಕ ವಿನಾಯಿತಿಗೆ ಆರ್​ಬಿಐ ನಿರ್ಧರಿಸಿದೆ. ಈ ವ್ಯವಹಾರಗಳ ಮೇಲಿನ ಶುಲ್ಕ ತೆಗೆದುಹಾಕಲಾಗುವುದು. ಈ ಲಾಭವನ್ನು ಗ್ರಾಹಕರಿಗೆ ಬ್ಯಾಂಕ್​ಗಳು ವರ್ಗಾಯಿಸಬೇಕು ಎಂದು ಆರ್​ಬಿಐ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಾಲದ ಮೇಲಿನ ಬಡ್ಡಿದರ ಇಳಿಕೆ?

ಆರ್​ಬಿಐ ಆದೇಶದ ಪ್ರಕಾರ ರೆಪೋ ದರ ಇಳಿಕೆ ಲಾಭವನ್ನು ಬ್ಯಾಂಕ್​ಗಳು ಗ್ರಾಹಕರಿಗೆ ನೇರವಾಗಿ ವರ್ಗಾಯಿಸಬೇಕು. ಹೀಗಾಗಿ ಗೃಹ ಹಾಗೂ ವಾಹನ ಸಾಲದ ಮೇಲಿನ ಬಡ್ಡಿದರ ಸ್ವಲ್ಪ ಇಳಿಕೆಯಾಗುವ ಸಾಧ್ಯತೆಯಿದೆ.

ಸಭೆಯ ಮುಖ್ಯಾಂಶ

  • 25 ಮೂಲಾಂಶ ಇಳಿಕೆ, ಶೇ.5.75ಕ್ಕೆ ತಲುಪಿದ ರೆಪೋ ದರ
  • ಶೇ.5.50ಕ್ಕೆ ಬಂದಿಳಿದ ರಿವರ್ಸ್ ರೆಪೋ ದರ
  • ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ ಶೇ.7ಕ್ಕೆ ನಿಲ್ಲುವ ಮುನ್ಸೂಚನೆ, ಈ ಮೊದಲು ಶೇ.7.2ರ ನಿರೀಕ್ಷೆ ಮಾಡಲಾಗಿತ್ತು.
  • ಮುಂಗಾರು ಅನಿಶ್ಚಿತತೆ, ದಿನಸಿ ಹಾಗೂ ತರಕಾರಿಗಳ ಬೆಲೆ ಏರಿಕೆ ಕಾರಣದಿಂದ ಹಣದುಬ್ಬರ ಪ್ರಮಾಣದಲ್ಲಿಯೂ ಶೇ.3ರಿಂದ ಶೇ.3.7ರವರೆಗೆ ಏರಿಕೆ ಸಾಧ್ಯತೆ
  • ಸಣ್ಣ ಆರ್ಥಿಕ ವ್ಯವಹಾರಗಳ ಬ್ಯಾಂಕ್ ಪರವಾನಗಿ ಕುರಿತು ಮಾರ್ಗಸೂಚಿ ಕರಡು ಆಗಸ್ಟ್ ಒಳಗೆ ಪ್ರಕಟ
  • ಜೂನ್ ಆರಂಭದಲ್ಲಿ ದೇಶದ ಆರ್ಥಿಕತೆಯಲ್ಲಿ 66 ಸಾವಿರ ಕೋಟಿ ರೂ. ಹೆಚ್ಚುವರಿ ನಗದು ಲಭ್ಯ

ಎಟಿಎಂ ಶುಲ್ಕ ಇಳಿಕೆ?

ಎಟಿಎಂ ಶುಲ್ಕ ವಿನಾಯಿತಿ ಅಥವಾ ಇಳಿಕೆಗೆ ಸಂಬಂಧಿಸಿ ಆರ್​ಬಿಐ ಸಮಿತಿ ರಚಿಸಿದೆ. ಇಂಡಿಯನ್ ಬ್ಯಾಂಕ್ ಸಿಇಒ ನೇತೃತ್ವದ ಸಮಿತಿ 2 ತಿಂಗಳಲ್ಲಿ ವರದಿ ನೀಡಲಿದ್ದು, ಬ್ಯಾಂಕ್​ಗಳು ಗ್ರಾಹಕರ ಮೇಲೆ ವಿಧಿಸುತ್ತಿರುವ ಶುಲ್ಕ ಮರು ಪರಿಶೀಲನೆ ಮಾಡಬೇಕು ಎಂದು ಸಮಿತಿಗೆ ಸೂಚಿಸಲಾಗಿದೆ.

ದೇಶದ ಆರ್ಥಿಕ ಪ್ರಗತಿ ದೃಷ್ಟಿಯಿಂದ ಸತತ ಮೂರನೇ ಬಾರಿಗೆ ರೆಪೋ ದರ ಇಳಿಸಲಾಗಿದೆ. ಭವಿಷ್ಯದಲ್ಲಿ ಇದು ಆರ್ಥಿಕತೆ ಮೇಲೆ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ.

| ಶಕ್ತಿಕಾಂತ್ ದಾಸ್ ಆರ್​ಬಿಐ ಗವರ್ನರ್

Leave a Reply

Your email address will not be published. Required fields are marked *