ಅನ್ನದಾತ ಈಗ ಋಣಮುಕ್ತ

ದೊಡ್ಡಬಳ್ಳಾಪುರ/ಸೇಡಂ: ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ನೀಡುವ ಮೂಲಕ ಸರ್ಕಾರವನ್ನು ಟೀಕಿಸುವವರಿಗೆ ತಕ್ಕ ಉತ್ತರ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಭಗತ್​ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ರೈತರಿಗೆ ಋಣಮುಕ್ತ ಪತ್ರ ವಿತರಿಸಿ ಮಾತನಾಡಿದ ಅವರು, 45 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುವುದು ಸುಲಭದ ಮಾತಲ್ಲ. ಕೇಂದ್ರದ ಆಡಳಿತಕ್ಕೆ ಒಳಪಡುವ ವಾಣಿಜ್ಯ ಬ್ಯಾಂಕ್ ಮುಖ್ಯಸ್ಥರ ಸಭೆಯಲ್ಲಿ ಸಾಲಮನ್ನಾಗೆ ಸಹಕಾರ ನೀಡುವಂತೆ ಕೋರಿದರೆ ಸಮರ್ಪಕವಾಗಿ ಮಾಹಿತಿ ನೀಡದೆ ಕೊಟ್ಟ ಮಾತು ತಪ್ಪಿರುವ ವಾಣಿಜ್ಯ ಬ್ಯಾಂಕ್​ಗಳು ಕೇಂದ್ರದ ಅಣತಿಯಂತೆ ನಡೆಯುತ್ತಿವೆ. ಇದರಿಂದಲೇ ಸಾಲಮನ್ನಾ ವಿಳಂಬವಾಗುತ್ತಿದೆ ಎಂದರು. ರೈತರ ಬಗ್ಗೆ ಸರ್ಕಾರಕ್ಕಿರುವ ಗೌರವವನ್ನು ಅನುಮಾನದಿಂದ ನೋಡಬೇಡಿ. ನಮ್ಮಲ್ಲಿ ಗೊಂದಲಗಳಿಲ್ಲ. ರೈತರ ಮನೆಬಾಗಿಲಿಗೆ ಸಾಲಮನ್ನಾ ಋಣಮುಕ್ತಪತ್ರ ನೀಡುತ್ತಿದ್ದೇವೆ. ಇದರಲ್ಲಿ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರಿಂದ ಹೇಳಿಸಿಕೊಳ್ಳುವಂಥದ್ದೇನಿಲ್ಲ ಎಂದು ಹರಿಹಾಯ್ದರು.

7 ರೈತರಿಗೆ ತೀರುವಳಿ ಪತ್ರ: ದೊಡ್ಡಬಳ್ಳಾಪುರದ ಭದ್ರಮ್ಮ, ಚಿಕ್ಕೇಗೌಡ, ನೆಲಮಂಗಲದ ಚನ್ನೇಗೌಡ, ಹೊಸಕೋಟೆಯ ಮಂಜುಳಾ, ದೇವನಹಳ್ಳಿಯ ಉಷಾರಾಣಿ ಹಾಗೂ ದೊಡ್ಡಬೆಳವಂಗಲದ ರಾಘವೇಂದ್ರಾಚಾರ್, ಚಿಕ್ಕರಂಗಯ್ಯಗೆ ಸಾಂಕೇತಿಕವಾಗಿ ಋಣಮುಕ್ತಪತ್ರ ನೀಡಲಾಯಿತು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸಚಿವ ಕೃಷ್ಣಬೈರೇಗೌಡ ಇತರರಿದ್ದರು.

ಸೌಲಭ್ಯ ಕೇಳಿದರೆ ಮಂಚಕ್ಕೆ ಕರಿತಾರೆ!

ಕಾರ್ಯಕ್ರಮದ ವೇಳೆ ಸಾರ್ವಜನಿಕರ ಗ್ಯಾಲರಿಯಲ್ಲಿ ಕುಳಿತಿದ್ದ ದೊಡ್ಡಬಳ್ಳಾಪುರ ನಿವಾಸಿ ಛಾಯಾ ಎನ್ನುವವರು, ನನ್ನ ಗಂಡ ಮರಣ ಹೊಂದಿದ್ದಾರೆ. ಸರ್ಕಾರಿ ಸೌಲಭ್ಯ ಕೇಳಿಕೊಂಡು ಯಾರ ಬಳಿ ಹೋದರೂ ಲಂಚ ಕೇಳ್ತಾರೆ. ಇಲ್ಲವೇ ಮಂಚಕ್ಕೆ ಕರೀತಾರೆ. ಕುಮಾರಸ್ವಾಮಿಯವರೇ ಸಹಾಯ ಮಾಡಿ ಎಂದು ಚೇರ್ ಮೇಲೆ ನಿಂತು ಕೂಗಿದಾಗ ಪೊಲೀಸರು ಮಹಿಳೆಯನ್ನು ಹೊರಗೆ ಕರೆದುಕೊಂಡು ಹೋದರು.

ಸಿಎಂ ಎಚ್.ಡಿ.ಕುಮಾರಸ್ವಾಮಿ ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿದ್ದಾರೆ. ಇದೇ ರೀತಿ ಎಲ್ಲ ರೈತರ ಸಾಲಮನ್ನಾ ಮಾಡಲಿ.

| ಉಷಾರಾಣಿ ಬಿದಲೂರು, ದೇವನಹಳ್ಳಿ

14.37 ಕೋಟಿ ರೂ. ಮನ್ನಾ

ರಾಜ್ಯದಲ್ಲಿ ಸಹಕಾರ ಸಂಘದ ಒಟ್ಟು 88,806 ರೈತರ 294 ಕೋಟಿ ರೂ.ಸಾಲಮನ್ನಾ ಆಗಿದ್ದು, ಇದರಲ್ಲಿ ಗ್ರಾಮಾಂತರ ಜಿಲ್ಲೆಯ 17,347 ರೈತರ 83. 89 ಕೋಟಿ ರೂ. ಸಾಲಮನ್ನಾ ಆಗಿದೆ. ದೊಡ್ಡಬಳ್ಳಾಪುರದ 3,376 ರೈತರ 14.37 ಕೋಟಿ ರೂ. ಮನ್ನಾ ಮಾಡಲಾಗಿದೆ.

ಸೇಡಂನಲ್ಲೂ ಪ್ರಾಯೋಗಿಕ ವಿತರಣೆ

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ 374 ರೈತರಿಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಋಣಮುಕ್ತ ಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದ್ದು, ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 48,000 ಕೋಟಿ ಸಾಲ ಮನ್ನಾ ಮಾಡುವ ಉದ್ದೇಶ ಹೊಂದಿದ್ದು, ಕಲಬುರಗಿ ಜಿಲ್ಲೆಯ ಸುಮಾರು 2.14 ಲಕ್ಷ ರೈತರು ಯೋಜನೆ ಲಾಭ ಪಡೆಯಲಿದ್ದಾರೆ ಎಂದರು.

2.54 ಲಕ್ಷ ರೈತರ ಸಾಲ ಮನ್ನಾ: ಕಲಬುರಗಿ ಜಿಲ್ಲೆಯಲ್ಲಿ 2.54 ಲಕ್ಷ ರೈತರ ಸಾಲಮನ್ನಾ ಮಾಡಲಾಗಿದೆ. ಈ ಪೈಕಿ ರಾಷ್ಟ್ರೀಕೃತ ಬ್ಯಾಂಕುಗಳ 2.02 ಲಕ್ಷ, ಸಹಕಾರಿ ಬ್ಯಾಂಕಿನ 52 ಸಾವಿರ ರೈತರು ಸೇರಿದ್ದು, ಸಹಕಾರಿ ಬ್ಯಾಂಕಿನ ಮೂಲಕ 144 ಕೋಟಿ ರೂ. ಸಾಲ ಮನ್ನಾ ಆಗಬೇಕಿದೆ.

ಸರ್ಕಾರ ರೈತರ ಸಾಲಮನ್ನಾ ಮಾಡಿರುವುದು ಖುಷಿ ತಂದಿದೆ. ಬಡ ರೈತರಿಗೆ ಸಹಕಾರಿ ಸಂಘಗಳಲ್ಲಿ ಸೀಮಿತ ಸಾಲ ನೀಡಲಾಗುತ್ತಿದೆ. ಹೆಚ್ಚಿನ ಸಾಲ ಸಿಗಬೇಕಿದೆ.

| ತಿಪ್ಪಣ್ಣ ಬಾಬಣ್ಣ ಕುರಕುಂಟಾ ಫಲಾನುಭವಿ ರೈತ ಸೇಡಂ