More

    ಸಾಲ ಮರು ಪಾವತಿಸಲು ಹಿಂದೇಟು

    ಬ್ರಹ್ಮಾವರ: ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲದಿಂದ ಗ್ರಾಹಕರು ಮುಕ್ತವಾಗುವ ಋಣಮುಕ್ತ ಕಾಯ್ದೆ ಬಗ್ಗೆ ಸೃಷ್ಟಿಯಾದ ಗೊಂದಲದಿಂದ ಕರಾವಳಿ ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಸಾಲ ಬೃಹತ್ ಪ್ರಮಾಣದಲ್ಲಿ ಮರುಪಾವತಿಗೆ ಬಾಕಿಯಿದ್ದು, ಹಣಕಾಸು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ.

    ಆರ್‌ಬಿಐ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಿರು ಹಣಕಾಸು ಸಂಸ್ಥೆಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಸಾಲ ನೀಡುತ್ತವೆ. ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಜಾರಿಗೆ ತಂದಿರುವ ಋಣಮುಕ್ತ ಕಾಯ್ದೆ ವ್ಯಾಪ್ತಿಗೆ ಈ ಸಂಸ್ಥೆಗಳ ಸಾಲ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೋರಾಟ ಸಮಿತಿಗಳು ಜನರಲ್ಲಿ ಮೈಕ್ರೋ ಫೈನಾನ್ಸ್‌ಗಳ ಸಾಲ ಮರುಪಾವತಿಸಬೇಕಿಲ್ಲ ಎಂದು ಹೇಳಿರುವುದರಿಂದ ಜನರು ಸಾಲ ಮರುಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲ ತಿಂಗಳಿಂದ ಅಸೋಸಿಯೇಶನ್ ಆಫ್ ಕರ್ನಾಟಕ ಮೈಕ್ರೋಫೈನಾನ್ಸ್ ಇನ್‌ಸ್ಟಿಟ್ಯೂಷನ್ಸ್(ಆಕ್ಮಿ), ಮೈಕ್ರೋಫೈನಾನ್ಸ್ ಇನ್‌ಸ್ಟಿಟ್ಯೂಷನ್ ನೆಟ್‌ವರ್ಕ್(ಎಂಫಿನ್) ಮತ್ತು ಮೈಕ್ರೋ ಫೈನಾನ್ಸ್ ಸಂಘಟನೆಗಳ ಉದ್ಯಮವಾಗಿರುವ ಸಾ-ಧನ್‌ನ ಅಧಿಕಾರಿಗಳು ಉಭಯ ಜಿಲ್ಲೆಗಳಲ್ಲಿ ಸಂಚರಿಸಿ ಜನರಲ್ಲಿ ಸಾಲ ಕಟ್ಟುವಂತೆ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಸಕಾಲದಲ್ಲಿ ಸಾಲ ಮರುಪಾವತಿಸದಿದ್ದರೆ ಕ್ರೆಡಿಟ್ ಬ್ಯೂರೋದಲ್ಲಿ ಸಾಲಗಾರರು ಸುಸ್ತಿದಾರರಾಗುತ್ತಾರೆ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಕಷ್ಟವಾಗುತ್ತದೆ ಎಂದು ತಿಳಿವಳಿಕೆ ಮೂಡಿಸಲಾಗುತ್ತಿದೆ.

    ಪ್ರಾಮಾಣಿಕರಿಗೆ ತೊಂದರೆ: ಋಣಮುಕ್ತ ಹೋರಾಟ ಸಮಿತಿಯ ಹೆಸರಿನಲ್ಲಿ ಸಂಘಟನೆ ರಚಿಸಿ ಸಾಲ ಪಡೆದವರಿಗೆ ಮಾಹಿತಿ ಕಾರ್ಯಾಗಾರ ಮತ್ತು ಮೈಕ್ರೋ ಫೈನಾನ್ಸ್ ದೌರ್ಜನ್ಯದಿಂದ ನೊಂದವರ ಪ್ರತಿಭಟನಾ ಸಮಾವೇಶ ಅಲ್ಲಲ್ಲಿ ನಡೆಸಲಾಗುತ್ತಿದೆ. ಅಲ್ಲಿನ ಭಾಷಣ ಕೇಳಿದ ಬಳಿಕ ಸಾಲ ಪಡೆದವರು ವಾದಕ್ಕಿಳಿಯುತ್ತಿದ್ದಾರೆ. ನಮ್ಮ ಸಾಲ ಋಣಮುಕ್ತ ಕಾಯ್ದೆಯಿಂದ ಮನ್ನಾ ಆಗಿದೆ. ನಾವು ಸಾಲ ಮರುಪಾವತಿ ಮಾಡುವುದಿಲ್ಲ ಎಂದು ಹೇಳುತ್ತಿರುವುದರಿಂದ ಅಲ್ಲಲ್ಲಿ ಮಾತಿನ ಚಕಮಕಿಗಳು ನಡೆಯುತ್ತಿವೆ. ಇದರಿಂದಾಗಿ ಕೆಲವು ಮೈಕ್ರೋ ಫೈನಾನ್ಸ್‌ಗಳು ಸಾಲ ನೀಡುವುದನ್ನು ಸ್ಥಗಿತ ಮಾಡಿದ ಕಾರಣ ಪ್ರಾಮಾಣಿಕವಾಗಿ ಮರುಪಾವತಿ ಮಾಡುವವರಿಗೆ ತೊಂದರೆಯಾಗಿದೆ.

    400 ಕೋಟಿ ರೂ. ಬಾಕಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಿಂಗಳ ಹಿಂದೆ 400 ಕೋಟಿ ರೂ. ಮರುಪಾವತಿಗೆ ಬಾಕಿ ಇತ್ತು. ಈ ಪೈಕಿ ಶೇ.10ರಷ್ಟು ಪಾವತಿಯಾಗಿದೆ. ಹೋರಾಟ ಸಮಿತಿಗಳು ಜನರಲ್ಲಿ ಗೊಂದಲ ಉಂಟು ಮಾಡಿದ ಕಾರಣ ನವೆಂಬರ್ ಬಳಿಕ ಮರುಪಾವತಿಗೆ ಜನರು ವಿಳಂಬ ಮಾಡುತ್ತಿದ್ದಾರೆ. ರಾಜ್ಯದ ಇತರ ಕಡೆಗಳಲ್ಲಿ ಮರು ಪಾವತಿ ಶೇ.99ರಷ್ಟಾಗುತ್ತಿದೆ. ಈ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಿದ ಬಳಿಕ ಸಾಲ ಮರುಪಾವತಿ ಆರಂಭಗೊಂಡಿದೆ ಎಂದು ಆಕ್ಮಿ ಕಾರ್ಯದರ್ಶಿ ಶಾಂತ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.

    ಯಾರಿಗೆ ದೂರು ನೀಡಬೇಕು?: ಮೈಕ್ರೋ ಫೈನಾನ್ಸ್‌ಗಳು ವಿವಿಧ ರೀತಿಯಲ್ಲಿ ಚಟುವಟಿಕೆ ನಡೆಸುತ್ತವೆ. ಇದರಲ್ಲಿ ಮಹಿಳೆಯರಿಗೆ ಕಡಿಮೆ ದಾಖಲೆ ಪಡೆದು ಗುಂಪು ಸಾಲ ನೀಡುವುದೂ ಒಂದು. ಸುಲಭ ಕಂತುಗಳಲ್ಲಿ ಮರು ಪಾವತಿಗೆ ಅನುಕೂಲ ರೀತಿಯಲ್ಲಿ ಕಿರು ಸಾಲ ನೀಡಲಾಗುತ್ತದೆ. ವಾರ, ಪಾಕ್ಷಿಕ ಮತ್ತು ಮಾಸಿಕ ಅವಧಿಯಲ್ಲಿ ಮರು ಪಾವತಿ ಮಾಡಬಹುದು. ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಿತ ಮೈಕ್ರೊಫೈನಾನ್ಸ್‌ನ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು. 15 ದಿನಗಳಲ್ಲಿ ಪರಿಹಾರ ಸಿಗದಿದ್ದರೆ ಗ್ರಾಹಕರು ಇಂಡಸ್ಟ್ರಿ ಅಸೋಸಿಯೇಶನ್‌ಗಳಾದ ಆಕ್ಮೀ, ಸಾ-ಧನ್ ಅಥವಾ ಎಂ ಫಿನ್ ಸಂಪರ್ಕಿಸಬಹುದು. ಇಲ್ಲೂ 30 ದಿನಗಳೊಳಗೆ ಪರಿಹಾರ ಸಿಗದಿದ್ದರೆ ಆರ್‌ಬಿಐನ ಒಂಬುಡ್ಸ್‌ಮೆನ್‌ಗೆ ದೂರು ಸಲ್ಲಿಸಬಹುದು.

    ಬಂದಿರುವ ಅರ್ಜಿಗಳೆಷ್ಟು?: ಋಣಮುಕ್ತ ಕಾಯ್ದೆಯಡಿ ಅನ್ವಯವಾಗುವ ಸಾಲ ಪಡೆದವರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅದರಂತೆ ಉಡುಪಿ ಜಿಲ್ಲೆಯಲ್ಲಿ 5,000 ಅರ್ಜಿಗಳು ಕುಂದಾಪುರ ಉಪವಿಭಾಗಾಧಿಕಾರಿಗೆ ಸಲ್ಲಿಕೆಯಾಗಿದೆ. ಅದರಲ್ಲಿ 4998 ಅರ್ಜಿಗಳು ತಿರಸ್ಕೃತಗೊಂಡಿದ್ದು, 2 ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗಿದೆ. ಪುತ್ತೂರು ಉಪವಿಭಾಗಾಧಿಕಾರಿ ಕಚೇರಿಗೆ 7,500 ಅರ್ಜಿ ಬಂದಿದ್ದು, ಇವುಗಳಲ್ಲಿ ಹೆಚ್ಚಿನವು ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದ್ದಾಗಿದೆ. ಮಂಗಳೂರು ಉಪವಿಭಾಗಾಧಿಕಾರಿ ಕಚೇರಿಗೆ 485 ಅರ್ಜಿಗಳು ಬಂದಿದ್ದು, ಪರಿಶೀಲನೆಯಲ್ಲಿದೆ.

    ಮೈಕ್ರೋೈನಾನ್ಸ್ ಸಾಲಗಳು ಋಣಮುಕ್ತ ಕಾಯ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೆ ಬಂದಿರುವ ಬಹುತೇಕ ಅರ್ಜಿಗಳು ಮೈಕ್ರೋ ಫೈನಾನ್ಸ್ ಸಾಲಗಳಿಗೆ ಸಂಬಂಧಪಟ್ಟಿರುವುದಾಗಿದೆ. ಈ ಕುರಿತು ಪರಿಶೀಲನೆ ನಡೆಯುತ್ತಿದೆ.
    ಯತೀಶ್ ಉಳ್ಳಾಲ್, ಪುತ್ತೂರು ಉಪವಿಭಾಗಾಧಿಕಾರಿ

    ಆರ್‌ಬಿಐನ ಕಾನೂನು ವ್ಯಾಪ್ತಿಯಲ್ಲಿ ಮೈಕ್ರೋಫೈನಾನ್ಸ್ ಕಾರ್ಯನಿರ್ವಹಿಸುತ್ತಿದೆ. ದುರುದ್ದೇಶಪೂರ್ವಕವಾಗಿ ಗೊಂದಲ ಉಂಟು ಮಾಡಿದ ಕಾರಣ ಮರುಪಾವತಿ ವಿಳಂಬವಾಗುತ್ತಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪರಿಹಾರ ಕೇಂದ್ರ ತೆರೆಯಲಾಗಿದೆ. ಅದಕ್ಕೂ ಸ್ಪಂದನೆ ಇಲ್ಲ. ಈ ಬಗ್ಗೆ ಎರಡು ದಿನಗಳಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
    – ಶಾಂತ ಕುಮಾರ್, ಆಕ್ಮಿ, ಕಾರ್ಯದರ್ಶಿ

    ಮೈಕ್ರೋ ಫೈನಾನ್ಸ್ ಸರ್ಕಾರಕ್ಕೆ ಮತ್ತು ತೆರಿಗೆ ವಂಚಿಸಿದ ಹಣವನ್ನು ಮಹಿಳಾ ಸಬಲೀಕರಣ ಹೆಸರಿನಲ್ಲಿ ಅಧಿಕ ಬಡ್ಡಿಯಲ್ಲಿ ಮಹಿಳೆಯರನ್ನು ಸಾಲದ ಶೂಲಕ್ಕೆ ಹಾಕುತ್ತಿವೆ. ಋಣಮುಕ್ತ ಕಾಯ್ದೆ ಪ್ರಕಾರ ಇದು ಮರು ಪಾವತಿಸಬೇಕಾದ ಸಾಲ ಅಲ್ಲ.
    – ಬಿ.ಎಂ. ಭಟ್, ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷ, ವಕೀಲ

    – ಶಿವರಾಮ ಆಚಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts