More

    ಸಾಲ ಮಾಡಿಯಾದ್ರೂ ರೈತಪರ ಕಾರ್ಯಕ್ರಮ

    ಮೈಸೂರು: ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಸಾಲ ಮಾಡಿಯಾದರೂ ರೈತಪರ ಕಾರ್ಯಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. ನಂಜನಗೂಡಿನ ಶ್ರೀಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದ ಕೃಷಿ ಮತ್ತು ವಸ್ತುಪ್ರದರ್ಶನ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು.

    ಅನ್ನದಾತನ ಸ್ಥಿತಿ ಸುಧಾರಿಸಿಲ್ಲ. ಇದಕ್ಕೆ ಯಾರ ವಿರುದ್ಧವೂ ಬೊಟ್ಟು ಮಾಡಲ್ಲ. ರೈತರ ಕಣ್ಣೀರು ಒರೆಸಿ, ನೆಮ್ಮದಿ ಬದುಕು ಕಲ್ಪಿಸಿಕೊಡಲು ಶ್ರಮಿಸಲಾಗುವುದು. ಬೇರೆ ಕೆಲಸಕ್ಕೆ ಹಣಕಾಸಿನ ಕೊರತೆಯಾದರೂ ಪರವಾಗಿಲ್ಲ. ಸಾವಯವ ಕೃಷಿಗೆ ಒತ್ತು ನೀಡಿ, ಅಂತರ್ಜಲ ಮಟ್ಟ ವೃದ್ಧಿಸಿ, ಕೃಷಿಕರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಕ್ರಮ ವಹಿಸಲಾಗುವುದು. 3 ಸಾವಿರ ಕೋಟಿ ರೂ. ಮೊತ್ತದ ಆವರ್ತನಿಧಿ ಸ್ಥಾಪಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೊಟ್ಟು ಖರೀದಿಸಲಾಗುವುದು ಎಂದರು.

    ಸಾಲುಮರದ ತಿಮ್ಮಕ್ಕರನ್ನು ಸನ್ಮಾನಿಸಿದ ಸಿಎಂ, ತಿಮ್ಮಕ್ಕಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ಬಳಿಕ ರಾಷ್ಟ್ರಪತಿಯವರು 2 ಕೋಟಿ ರೂ. ನೀಡಲು ಸೂಚಿಸಿದ್ದರಿಂದ ತೆರಿಗೆ ಕಡಿತ ಮಾಡಿ 1.37 ಕೋಟಿ ರೂ.ಗಳನ್ನು ತಿಮ್ಮಕ್ಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. 50 ಲಕ್ಷ ರೂ. ಮೊತ್ತದ ಮನೆಯನ್ನು ಬೆಂಗಳೂರಿನಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ವರುಣ ಕ್ಷೇತ್ರದ ಜನರು ನನಗೆ ರಾಜಕೀಯ ಶಕ್ತಿ ತಂದುಕೊಟ್ಟಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಬಳಿ ಬಂದು ಆಶೀರ್ವಾದ ಪಡೆದುಕೊಳ್ಳುತ್ತೇನೆ ಎಂದು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಸೂಚ್ಯವಾಗಿ ಹೇಳಿದರು.

    ಸಿಎಂಗೆ ಸಹಕರಿಸಿ ಎಂದ ಜಿಟಿಡಿ

    ಸಿಎಂ ಬಿ.ಎಸ್.ಯಡಿಯೂರಪ್ಪ ಉಳಿದ ಮೂರೂ ವರ್ಷ ಪೂರ್ಣಗೊಳಿಸಲಿದ್ದಾರೆ. ಬೇರೆ ಯಾರೂ ಸಿಎಂ ಆಗುವ ಕನಸು ಕಾಣಬೇಡಿ ಎನ್ನುವ ಮೂಲಕ ಜೆಡಿಎಸ್ ನಾಯಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಅಚ್ಚರಿ ಮೂಡಿಸಿದ್ದಾರೆ. ಸುತ್ತೂರು ಜಾತ್ರಾ ಮಹೋತ್ಸವದ ಕೃಷಿ ಮೇಳ ಹಾಗೂ ವಸ್ತುಪ್ರದರ್ಶನ ಸಮಾರೋಪದಲ್ಲಿ ಸಿಎಂ ಆಗಮನಕ್ಕೂ ಮುನ್ನ ಮಾತನಾಡಿದ ಅವರು, ರೈತ ಹಾಗೂ ಜನಪರ ಆಡಳಿತ ನೀಡುತ್ತಿರುವ ಯಡಿಯೂರಪ್ಪ ಅವರನ್ನು ದ್ವೇಷ, ಅಸೂಯೆಯಿಂದ ಕಾಣುವುದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡುವತ್ತ ಸಹಕಾರ ನೀಡಿ ಎಂದು ಪ್ರತಿಪಕ್ಷ ನಾಯಕರಿಗೆ ಮಾರ್ವಿುಕವಾಗಿ ತಿವಿದರು. ಸಭಿಕರು ಶಿಳ್ಳೆ ಚಪ್ಪಾಳೆಯ ಸುರಿಮಳೆಗೈದರು.

    ಭಾವಿ ಸಚಿವರೇ

    ಶಾಸಕ ಕೆ.ಸುಧಾಕರ್​ಗೆ ಸಚಿವ ಸ್ಥಾನ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಿರಂಗವಾಗಿ ಖಾತ್ರಿಪಡಿಸಿದರು. ಭಾಷಣ ಮಾಡುವಾಗ ವೇದಿಕೆ ಮೇಲಿದ್ದವರ ಹೆಸರು ಪ್ರಸ್ತಾಪಿಸಿದ ಸಿಎಂ, ‘ಕೆಲ ದಿನಗಳಲ್ಲೇ ಸಚಿವ ಆಗಲಿರುವ ಸುಧಾಕರ್ ಅವರೇ’ ಎಂದು ಹೇಳಿದರು. ಆಗ ಸುಧಾಕರ್ ಮುಗುಳುನಗೆ ಬೀರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts