ಪತ್ನಿಯ ಅನುಮತಿ ಪಡೆದು ಮತ್ತೊಬ್ಬಾಕೆ ಜತೆ ಲಿವ್​ ಇನ್​ ಸಂಬಂಧ: ಅಕ್ರಮ ಸಂಬಂಧ ಶಂಕೆಯಲ್ಲಿ ಪ್ರೇಯಸಿಯನ್ನೇ ಕೊಂದ!

ನವದೆಹಲಿ: ಇಲ್ಲೊಬ್ಬ ಪುರುಷ ಪುಂಗವ ಧರ್ಮಪತ್ನಿಯ ಅನುಮತಿ ಪಡೆದು ಮತ್ತೊಬ್ಬಾಕೆ ಜತೆ ಲಿವ್​ ಇನ್​ ಸಂಬಂಧ ಇರಿಸಿಕೊಂಡ. ಆದರೆ, ಲಿವ್​ ಇನ್​ ಸಂಗಾತಿಗೆ ಅಕ್ರಮ ಸಂಬಂಧ ಇದೆ ಎಂಬ ಶಂಕೆಯಲ್ಲಿ ಆಕೆಯನ್ನು ಕೊಂದ!

ದಹೆಲಿಯ ಕನಾಟ್​ ಪ್ಲೇಸ್​ ನಿವಾಸಿ ರಾಮ್​ ದಾಸ್​ (42) ಕೊಂದವ. ಪಾಯಲ್​ ಕೊಲೆಯಾದಾಕೆ. ರಾಮ್​ ದಾಸ್​ಗೆ ಮೊದಲೇ ಮದುವೆಯಾಗಿತ್ತು. ಆದರೆ ಪಾಯಲ್​ ಪ್ರೇಮಪಾಶದಲ್ಲಿ ಆತ ಸಿಲುಕಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತ ಮೊದಲ ಪತ್ನಿಯ ಅನುಮತಿ ಪಡೆದು, ಪಾಯಲ್​ ಜತೆ ಲಿವ್​ ಇನ್​ ಸಂಬಂಧ ಇರಿಸಿಕೊಂಡಿದ್ದ.

ಇತ್ತೀಚಿಗೆ ನಿವೇಶನ ಖರೀದಿಸುವ ವಿಷಯದಲ್ಲಿ ರಾಮ್​ ದಾಸ್​ ಮತ್ತು ಪಾಯಲ್​ ನಡುವೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ಸಹೋದರಿ ಮನೆಗೆ ಹೋಗಿ ಕೆಲದಿನಗಳಿಂದ ಅಲ್ಲಿಯೇ ನೆಲೆಸಿದ್ದಳು. ಆದರೆ ರಾಮ್​ ದಾಸ್​ನನ್ನು ಭೇಟಿಯಾಗಲು ಶುಕ್ರವಾರ ಬಂದಿದ್ದಳು.

ಈ ವೇಳೆ ನಿವೇಶನ ಖರೀದಿ ವಿಷಯವಾಗಿ ಇಬ್ಬರ ನಡುವೆ ಮತ್ತೊಮ್ಮೆ ಜಗಳವಾಗಿದೆ. ಆಗ ಆಕೆಯ ಶೀಲ ಶಂಕಿಸಿ ರಾಮ್​ ದಾಸ್​ ಕೊಂಕು ಮಾತನಾಡಿದ್ದಾನೆ. ಬಳಿಕ ಕೈಗೆ ಸಿಕ್ಕ ಮರದ ತುಂಡು ಎತ್ತಿಕೊಂಡು ಪಾಯಲ್​ನ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ಪಾಯಲ್​ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.

ಆಕೆಯ ದೇಹವನ್ನು ಶೌಚಗೃಹದೊಳಗೆ ಇರಿಸಿ ಪರಾರಿಯಾಗಲು ರಾಮ್​ ದಾಸ್​ ಯತ್ನಿಸಿದ್ದ. ಆದರೆ, ಗಲಾಟೆಯ ಸದ್ದಿನಿಂದ ಎಚ್ಚೆತ್ತುಕೊಂಡಿದ್ದ ನೆರೆಹೊರೆಯವರು ರಾಮ್​ ದಾಸ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.(ಏಜೆನ್ಸೀಸ್​)