ಮೌನದ ಬದುಕಿನಲ್ಲಿ ಮದುವೆಯ ಸಡಗರ…

ಆಲೂರು: ಹುಟ್ಟಿನಿಂದಲೂ ಅವರಿಬ್ಬರದ್ದು ‘ಮೌನದ ಬದುಕು’… ಈ ಮೌನದ ಬದುಕಿನ ಹಾದಿಯಲ್ಲಿ ಇದೀಗ ಮದುವೆ ಎಂಬ ಸಡಗರ…
ಹೌದು, ಪಟ್ಟಣದ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಬುಧವಾರ ಮೂಕ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮಂಡ್ಯ ಜಿಲ್ಲೆ ವೈಯಾರಹಳ್ಳಿ ಗ್ರಾಮದ ಮಾದಯ್ಯ ಎಂಬುವರ ಮಗ ವೈ.ಎಂ.ಮಹೇಶ್ ಮತ್ತು ಪಾಳ್ಯ ಹೋಬಳಿ ಗುಂಡನಬೆಳ್ಳೂರು ಗ್ರಾಮದ ಮಂಜಣ್ಣ ಎಂಬುವರ ಮಗಳು ಪವಿತ್ರಾ ಹಿರಿಯರ ಸಮ್ಮುಖದಲ್ಲಿ ಸತಿ-ಪತಿ ಆದರು.
ವರ ವೈ.ಎಂ.ಮಹೇಶ್ ರಾಜ್ಯ ಮಟ್ಟದ ಶ್ರೇಷ್ಠ ವಾಲಿಬಾಲ್ ಪಟುವಾಗಿದ್ದು, ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯದಲ್ಲಿ ಭಾಗವಹಿಸಿದ್ದ ಕೀರ್ತಿ ಇವರದ್ದಾಗಿದೆ. ಇವರ ಪೋಷಕರಾದ ಮಾದಯ್ಯ ದಂಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಹೇಶ್ ಐಟಿಐ ಓದಿ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ವಧು ಪವಿತ್ರಾ ಅವರ ತಂದೆ ಮಂಜಣ್ಣ ಅವರಿಗೆ ಮೂವರು ಹೆಣ್ಣುಮಕ್ಕಳು. ದುರದೃಷ್ಟವಶಾತ್ ಮೂವರಲ್ಲಿ ಮೊದಲ ಎರಡು ಮಕ್ಕಳೂ ಮೂಕರು. ಹಿರಿಯ ಮಗಳೇ ಪವಿತ್ರಾ. ಎರಡನೇ ಮಗಳು ಸುಚಿತ್ರಾಳೂ ಮೂಕಳಾಗಿದ್ದು, ಮೈಸೂರಿನ ಖಾಸಗಿ ಮೂಗರ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಸಕಲೇಶಪುರದ ಕೌಡಳ್ಳಿಯ ಮೂಕರ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ವ್ಯಾಸಂಗ ಮಾಡಿರುವ ಪವಿತ್ರಾ, ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದಾರೆ.
ಇನ್ನು ಮೂರನೇ ಮಗಳು ಸುಪ್ರಿತಾ ಮೈಸೂರಿನ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದು, ತಮ್ಮ ಇಡೀ ವರ್ಷದ ಕೂಲಿಯ ದುಡಿಮೆ ಆಕೆಯ ವ್ಯಾಸಂಗಕ್ಕೆ ಖರ್ಚಾಗುತ್ತಿದೆ ಎಂದು ತಂದೆ ಮಂಜಣ್ಣ ಅಳಲು ತೋಡಿಕೊಳ್ಳುತ್ತಾರೆ.
ಮೊದಲ ಭೇಟಿ: ಕೆಲ ತಿಂಗಳ ಹಿಂದೆ ಸಕಲೇಶಪುರದಲ್ಲಿ ನಡೆದ ಮದುವೆಯೊಂದರಲ್ಲಿ ಈ ಎರಡೂ ಕುಟುಂಬದವರು ಭೇಟಿಯಾಗಿದ್ದಾರೆ. ನಂತರ ಮಾತುಕತೆ ನಡೆಸಿ ವಿವಾಹ ನೆರವೇರಿಸಿದ್ದಾರೆ.

Leave a Reply

Your email address will not be published. Required fields are marked *