ಗಗನಕ್ಕೇರಿದ ಮೇವಿನ ಬೆಲೆ: ಜಾನುವಾರುಗಳ ನಿರ್ವಹಣೆ ಕಷ್ಟ ಕಷ್ಟ…

ಗದಗ: ಸತತ ಬರಗಾಲದಿಂದಾಗಿ ರೈತ ಸಮೂಹ ಹಲವು ಸಮಸ್ಯೆ ಎದುರುತ್ತಿದೆ. ಮುಖ್ಯವಾಗಿ ಮೇವಿನ ಬೆಲೆ ಗಗನಕ್ಕೇರಿದ್ದರಿಂದ ಜಾನುವಾರುಗಳನ್ನು ಸಾಕುವುದೇ ದೊಡ್ಡ ಸವಾಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮಳೆಯಾಶ್ರಿತ ಭೂಮಿ ಬರಡಾಗಿದೆ. ರೈತರು ಕೂಡ ಪಾರಂಪರಿಕ ಬೆಳೆಗಳಾದ ಶೇಂಗಾ, ಜೋಳದ ಬದಲು ಸೂರ್ಯಕಾಂತಿ, ಈರುಳ್ಳಿ, ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳದಂತಹ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಹೀಗಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ. ಶೇಂಗಾ ಹೊಟ್ಟು, ಜೋಳದ ಸೊಪ್ಪಿ, ಭತ್ತದ ಹುಲ್ಲಿನ ಬೆಲೆ ಹೆಚ್ಚಾಗಿದೆ.

ಈಗಾಗಲೇ ತಾಲೂಕಿನಾದ್ಯಂತ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಜತೆ ನೀರಿನ ತಾಪತ್ರಯವೂ ಎದುರಾಗಿದೆ. ಕಳೆದ ವರ್ಷ 4 ಸಾವಿರ ರೂ.ಗೆ ಒಂದು ಟ್ರ್ಯಾಕ್ಟರ್ ಸಿಗುತ್ತಿದ್ದ ಶೇಂಗಾ ಹೊಟ್ಟಿನ ಬೆಲೆ ಪ್ರಸಕ್ತ ವರ್ಷ 6 ರಿಂದ 7 ಸಾವಿರ ರೂ. ತಲುಪಿದೆ. 3 ರಿಂದ 4 ಸಾವಿರ ರೂ. ಇದ್ದ ಒಂದು ಟ್ರ್ಯಾಕ್ಟರ್ ಜೋಳದ ಮೇವು ಈ ವರ್ಷ 5 ರಿಂದ 6 ಸಾವಿರ ರೂ. ಆಗಿದೆ. ಕೆಲ ನೀರಾವರಿ ಆಶ್ರಿತ ಜಮೀನಿನಲ್ಲಿ ಬೆಳೆದ ಜೋಳದ ಮೇವಿಗೆ ಭಾರಿ ಬೇಡಿಕೆ ಬಂದಿದೆ. ಪರಿಣಾಮ ರೈತರು ದಿನ ಬೆಳಗಾದರೆ ಯಾವ ಹೊಲದಲ್ಲಿ ಜೋಳ, ಶೇಂಗಾ ರಾಶಿ ನಡೆದಿದೆ ಎಂದು ಹೊಲದಿಂದ ಹೊಲಕ್ಕೆ ಅಲೆದಾಡಿ ಹೊಟ್ಟು, ಮೇವು ಖರೀದಿಸಿ ಸಂಗ್ರಹಿಸುತ್ತಿದ್ದಾರೆ.

ಮೇವು ಬ್ಯಾಂಕ್ ತೆರೆಯಲಿ: ತಾಲೂಕಿನಲ್ಲಿ ಜಾನುವಾರುಗಳ ರಕ್ಷಣೆಗೆ ಶಾಶ್ವತ ಮೇವು ಬ್ಯಾಂಕ್ ಸ್ಥಾಪಿಸಬೇಕು. ಈ ಮೂಲಕ ಹೊಟ್ಟು, ಮೇವು ಸಂಗ್ರಹಿಸಿ ಪ್ರಕೃತಿ ವಿಕೋಪ ಸಂದರ್ಭದಲ್ಲೂ ಪೂರೈಸಬೇಕು. ಸರ್ಕಾರ ಬರದ ಭೀಕರತೆ ಎದುರಾದಾಗಲೇ ಎಲ್ಲವನ್ನೂ ಹುಡುಕಲು ಹೊರಡುವುದು ಅವೈಜ್ಞಾನಿಕ. ಮುಂದಾಲೋಚನೆ ಮಾಡಿ ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ರೈತರು.

ಸತತ ಬರದಿಂದ ಮೇವಿನ ಕೊರತೆ ಹೆಚ್ಚಾಗಿದ್ದು, ಹೆಚ್ಚಿನ ಹಣ ನೀಡಿಯಾದರೂ ಜೋಳದ ಕಣಕಿ ಖರೀದಿಸುತ್ತಿದ್ದೇವೆ. ರೈತರಿಗೆ ಇದು ಅನಿವಾರ್ಯ ಆಗಿದೆ.
| ಅಂದಪ್ಪ ನಾಗನೂರ, ರೈತ, ಸರ್ಜಾಪೂರ

ನರೇಗಲ್, ರಾಜೂರ, ನಾಗೇಂದ್ರಗಡದಲ್ಲಿ ಮೇವಿನ ಬ್ಯಾಂಕ್ ತೆರೆಯಲು ಸ್ಥಳ ಗುರುತಿಸಲಾಗಿದೆ. ಇಲ್ಲಿಯವರೆಗೂ ರೈತರಿಂದ ಮೇವಿನ ಬೇಡಿಕೆ ಬಂದಿಲ್ಲ. ಬಂದ ತಕ್ಷಣವೇ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಮೇವು ಬ್ಯಾಂಕ್ ತೆರೆಯಲು ಕ್ರಮ ತೆಗೆದುಕೊಳ್ಳಲಾಗುತ್ತದೆ.
| ಗುರುಸಿದ್ದಯ್ಯ ಹಿರೇಮಠ, ತಹಸೀಲ್ದಾರ್