ಸಿದ್ಧಗಂಗಾಶ್ರೀ ಸರ್ಜರಿ ಸಕ್ಸಸ್

ತುಮಕೂರು: ಸಿದ್ಧಗಂಗಾ ಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಶನಿವಾರ ಚೆನ್ನೈನ ರೇಲಾ ಇನ್​ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್​ನಲ್ಲಿ ನಡೆಸಲಾದ ಪಿತ್ತನಾಳದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ವಿಶ್ವ ಪ್ರಸಿದ್ಧ ಶಸ್ತ್ರಚಿಕಿತ್ಸಕ ಡಾ.ಮೊಹಮ್ಮದ್ ರೇಲಾ ನೇತೃತ್ವದ ತಂಡ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಸತತ 4 ಗಂಟೆ ಸರ್ಜರಿ ನಡೆಸಿತು. ಸಾಮಾನ್ಯ ಅರಿವಳಿಕೆಯನ್ನು ಶ್ರೀಗಳಿಗೆ ನೀಡಲಾಗಿತ್ತು. ಸ್ಟೆಂಟ್​ನಿಂದಾಗಿ ಸೋಂಕು ತಗುಲಿದ್ದು, ಪಿತ್ತನಾಳದ ಭಾಗ ತೆಗೆದು ಅದನ್ನು ಕರುಳಿಗೆ ಜೋಡಿಸುವ ಮೂಲಕ ಶ್ರೀಗಳು ಪದೇಪದೆ ಅನುಭವಿಸುತ್ತಿದ್ದ ಪಿತ್ತನಾಳ ಸೋಂಕಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಯಿತು.

ಶಸ್ತ್ರಚಿಕಿತ್ಸೆ ಬಳಿಕ ತೀವ್ರ ನಿಗಾಘಟಕಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಯಿತು. ಪ್ರಜ್ಞೆ ಬಂದ ಬಳಿಕ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು. ಈ ವೇಳೆ ಬಳಲಿದ್ದ ಶ್ರೀಗಳ ಮೊಗದಲ್ಲಿ ನಗು ಕಾಣಿಸಿದೆ. ಗಂಟೆಯೊಳಗೆ ಶ್ರೀಗಳಿಗೆ ಪ್ರಜ್ಞೆ ಬಂದಿದ್ದು ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದ ರೀತಿಗೆ ವೈದ್ಯರ ತಂಡ ಅಚ್ಚರಿ ವ್ಯಕ್ತಪಡಿಸಿದೆ.

ದರ್ಶನಕ್ಕಿಲ್ಲ ಅವಕಾಶ

ಶ್ರೀಗಳಿಗೆ ಸೋಂಕು ತಗುಲದಂತೆ ತೀವ್ರ ನಿಗಾವಹಿಸಿರುವ ಡಾ. ರೇಲಾ ನೇತೃತ್ವದ ವೈದ್ಯರ ತಂಡ 1 ವಾರ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದೆ. ಸದ್ಯಕ್ಕೆ ಶ್ರೀಗಳ ದರ್ಶನಕ್ಕೆ ಯಾರಿಗೂ ಅವಕಾಶ ಮಾಡಿಕೊಡದಂತೆಯೂ ವೈದ್ಯರು ಸೂಚಿಸಿದ್ದಾರೆ ಎಂದು ಶ್ರೀಗಳ ಆರೋಗ್ಯ ಉಸ್ತುವಾರಿ ಹೊತ್ತಿರುವ ಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ.ಪರಮೇಶ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.