ದೀರ್ಘಾಯುಷಿಗಳು ನೀವಾಗಬೇಕಾ? ತಜ್ಞರು ಹೇಳುವುದೇನು?

ವಾಷಿಂಗ್ಟನ್​: ಬಹಳ ದಿನಗಳ ಕಾಲ ಬದುಕಬೇಕೆಂಬ ಆಸೆ ನಿಮಗಿದೆಯೇ? ಹಾಗಾದರೆ ಹೆಚ್ಚೆಚ್ಚು ಪ್ರವಾಸ ಕೈಗೊಳ್ಳಿ…

ಅರೆ… ಇದೇನಿದು ಪ್ರವಾಸ ಮಾಡಿದರೆ ದೀರ್ಘ ಕಾಲ ಬದುಕಿರಬಹುದೆ ಎಂಬ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ‘ಹೌದು’. ಸತತ 40 ವರ್ಷಗಳ ಅಧ್ಯಯನದ ನಂತರ ಈ ಸಂಗತಿ ಖಚಿತವಾಗಿದ್ದು, ಜೀವನದಲ್ಲಿ ಆಗಾಗ್ಗೆ ಪ್ರವಾಸ ಕೈಗೊಂಡರೆ ದೀರ್ಘಕಾಲ ಬದುಕಬಹುದು ಎಂದು ತಿಳಿದು ಬಂದಿದೆ.

ಕೆಲಸ ಕೆಲಸ ಎನ್ನುವುದನ್ನು ಬಿಟ್ಟು, ಕೆಲಸದ ಮಧ್ಯೆ ಆಗಾಗ್ಗೆ ಪ್ರವಾಸಕ್ಕೆ ತೆರಳಿ. ಈ ರೀತಿ ಪ್ರವಾಸಕ್ಕೆ ಹೋಗುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ ಎಂದು ಪ್ರೊ. ಸ್ಟ್ರಾಂಡ್​ಬರ್ಗ್​ ಎಂಬ ಸಂಶೋಧಕ ತಿಳಿಸಿದ್ದಾರೆ.

1919 ರಿಂದ 1934ರವರೆಗೆ ಜನಿಸಿರುವ 1,222 ಮಧ್ಯ ವಯಸ್ಕ ಗಂಡಸರನ್ನು ಸಂಶೋಧನೆಗೆ ಆರಿಸಿಕೊಳ್ಳಲಾಗಿದ್ದು, ಅವರೆಲ್ಲರೂ ಒಂದಲ್ಲಾ ಒಂದು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದವರೇ ಆಗಿದ್ದರು. ಧೂಮಪಾನ, ಹೆಚ್ಚಿನ ರಕ್ತದೊತ್ತಡ, ಹೈ ಕೊಲೆಸ್ಟ್ರಾಲ್​, ಓವರ್​ ವೇಯ್ಟ್​ ಮತ್ತು ಗ್ಲೂಕೋಸ್​ ಇನ್​ಟಾಲರೆನ್ಸ್​ನಿಂದ ಬಳಲುತ್ತಿರುವವರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಅಧ್ಯಯನಕ್ಕೆ ಬಳಸಿಕೊಂಡವರನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಿ ಒಂದು ಗುಂಪಿಗೆ ಕೇವಲ ಸಾಮಾನ್ಯ ಅರೋಗ್ಯದ​ ಕುರಿತು ಕಾಳಜಿ ವಹಿಸಲಾಗುತ್ತಿತ್ತು. ಆದರೆ ಮತ್ತೊಂದು ಗುಂಪಿನವರಿಗೆ ಪ್ರತಿಯೊಂದು ವಿಷಯದ ಬಗ್ಗೆ ಕಾಳಜಿ ವಹಿಸಿ ಅವರಿಗೆ ಆರೋಗ್ಯಕರ ಡಯಟ್​, ಏರೋಬಿಕ್ಸ್​, ಆರೋಗ್ಯಯುತ ತೂಕ ಗಳಿಸುವಿಕೆ, ತೂಕ ಇಳಿಸುವುದು, ದೈಹಿಕ ಚಟುವಟಿಕೆಗಳ ತರಬೇತಿ ನೀಡಿ ಇವುಗಳ ಜತೆ ಔಷಧಗಳನ್ನೂ ಕೊಟ್ಟು ಸತತ ಐದು ವರ್ಷ ಕಾಳಜಿ ವಹಿಸಲಾಯಿತು.

ಐದು ವರ್ಷವಾದ ನಂತರ ಎರಡನೇ ಗುಂಪಿನವರಲ್ಲಿ ಶೇ.46ರಷ್ಟು ಹೃದಯಸಂಬಂಧಿ ಕಾಯಿಲೆಗಳು ಕಡಿಮೆಯಾಗಿತ್ತು ಎಂಬ ಫಲಿತಾಂಶ ದೊರೆತಿದೆ.

ಅಧ್ಯಯನಕ್ಕೆ ಬಳಸಿಕೊಂಡವರಲ್ಲಿ ವರ್ಷದಲ್ಲಿ ಮೂರು ವಾರಕ್ಕೂ ಹೆಚ್ಚು ಕಾಲ ಪ್ರವಾಸ ಹೋದ ಗುಂಪಿಗೆ ಹೋಲಿಸಿದರೆ, ಪ್ರವಾಸಕ್ಕೆ ಮೂರು ವಾರಕ್ಕೂ ಕಡಿಮೆ ಸಮಯ ನೀಡಿದವರು ಶೇ.37ರಷ್ಟು ಬೇಗ ಮರಣಹೊಂದಿದ್ದಾರೆ ಎಂಬುದು ಈ ಅಧ್ಯಯನದಿಂದ ತಿಳಿದು ಬಂದಿದೆ.

1970 ರ ದಶಕದಲ್ಲಿ ಒತ್ತಡ ನಿರ್ವಹಣೆ ತಡೆಗಟ್ಟುವುದು ವೈದ್ಯಕೀಯ ಕ್ಷೇತ್ರದ ಒಂದು ಭಾಗವಾಗಿರಲಿಲ್ಲ. ಆದರೆ ಈಗ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ವ್ಯಕ್ತಿಗಳಿಗೆ ಒತ್ತಡ ನಿರ್ವಹಣೆಯನ್ನು ಶಿಫಾರಸು ಮಾಡಲಾಗಿದೆ ಎಂದು ಪ್ರೊಫೆಸರ್ ಸ್ಟ್ರಾಂಡ್​ಬರ್ಗ್​ ತಿಳಿಸಿದ್ದಾರೆ.

ಈ ಸುದ್ದಿ ಓದಿಯಾದರೂ ಇನ್ನುಮುಂದೆ ಕೇವಲ ಕೆಲಸ ಮಾಡದೆ, ಆಗಾಗ್ಗೆ ಪ್ರವಾಸಕ್ಕೆ ತೆರಳಿ, ಒತ್ತಡ ನಿರ್ಹಿಸಿಕೊಂಡು ದೀರ್ಘಕಾಲ ಬಾಳಿ.