ಸಹಜೀವನ ನಿತ್ಯರೋದನ

| ಅವಿನಾಶ ಮೂಡಂಬಿಕಾನ ಬೆಂಗಳೂರು

ನೈತಿಕತೆ, ಅನೈತಿಕತೆ ಎಂಬ ಜಿಜ್ಞಾಸೆಯ ಗೆರೆ ಮೇಲೆ ಕಸರತ್ತು ಮಾಡುತ್ತಿರುವ ಸಹಜೀವನದ ವ್ಯಾಖ್ಯಾನ ಕೂಡ ದಿಕ್ಕು ತಪು್ಪತ್ತಿದೆ. ಒಬ್ಬರನ್ನೊಬ್ಬರು ಪರಸ್ಪರ ತಿಳಿದುಕೊಳ್ಳುವ ನೆಪದಲ್ಲಿ ಮದುವೆ ಎಂಬ ಸಂಪ್ರದಾಯವನ್ನು ಬದಿಗಿಟ್ಟು ‘ಸಹಜೀವನ’ (ಲಿವ್ ಇನ್ ರಿಲೇಷನ್​ಶಿಪ್)ದ ಹೆಸರಲ್ಲಿ ಗೂಡು ಸೇರುವ ಸಂಗಾತಿಗಳು ಕೆಲವೇ ತಿಂಗಳಲ್ಲಿ ಸಂಸಾರ ನಡೆಸಲಾಗದೆ ದೂರಸರಿಯುತ್ತಿದ್ದಾರೆ. ಅಷ್ಟೇ ಅಲ್ಲ, ಇಂಥ ಪ್ರಕರಣಗಳು ವಂಚನೆ ಆರೋಪದಡಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿವೆ. 2018ರಲ್ಲಿ ರಾಜ್ಯದಲ್ಲಿ ಇಂತಹ 310 ಪ್ರಕರಣಗಳು ದಾಖಲಾಗಿರುವುದು ಸಹಜೀವನದ ರೋದನದ ದರ್ಶನ ಮಾಡಿಸಿವೆ. 2018ರಲ್ಲಿ ಪೊಲೀಸ್ ಠಾಣೆಗಳ ಮುಖಾಂತರವೇ 310ಕ್ಕೂ ಅಧಿಕ ಪ್ರಕರಣಗಳು ವನಿತಾ ಸಹಾಯವಾಣಿ ಕೇಂದ್ರಕ್ಕೆ ಶಿಫಾರಸು ಆಗಿವೆ. 2014-15ರಲ್ಲಿ ಇಂಥ 260, 2016-17ರಲ್ಲಿ 267, 2017-18ರಲ್ಲಿ 268 ಕೇಸ್​ಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಪೊಲೀಸರ ಪ್ರಕಾರ ಠಾಣೆ ಮೆಟ್ಟಿಲೇರುವ ಪ್ರಕರಣಗಳಿಗಿಂತ 2 ಪಟ್ಟು ಹೆಚ್ಚು ಕೇಸ್​ಗಳು ರಹಸ್ಯವಾಗಿ ಮುಚ್ಚಿಹೋಗುತ್ತಿವೆ.

ಡೇಟಿಂಗ್ ಆಪ್ ಬಗ್ಗೆ ಎಚ್ಚರ: ಫೇಸ್​ಬುಕ್ ಮತ್ತು ಕೆಲ ಡೇಟಿಂಗ್ ಆಪ್​ಗಳ ಮೂಲಕ ಪರಿಚಯವಾಗಿ ಸಹಜೀವನದವರೆಗೆ ಹೋದವರಿದ್ದಾರೆ. ಯುವತಿಯರನ್ನು ಪರಿಚಯಿಸಿಕೊಂಡು ವಂಚಿಸಿರುವ ಹಲವು ಪ್ರಕರಣಗಳು ಠಾಣೆ ಮೆಟ್ಟಿಲೇರಿವೆ. ಯುವತಿಯರೂ ಕೂಡ ಡೇಟಿಂಗ್ ಆಪ್​ಗಳನ್ನು ಡೌನ್​ಲೋಡ್ ಮಾಡಿ ಸಮಯ ಕಳೆಯಲೆಂದು ಕೆಲ ಯುವಕರ ನಂಬರ್ ಪಡೆದು ವಂಚನೆಗೊಳಗಾಗುತ್ತಾರೆ. ಆಂಡ್ರಾಯ್್ಡ ಮೊಬೈಲ್​ನಲ್ಲಿ ಡೇಟಿಂಗ್ ಆಪ್​ಗಳನ್ನು ಡೌನ್​ಲೋಡ್ ಮಾಡಿದ ಬಳಿಕ ನಿಮ್ಮ ವಿವರಗಳನ್ನು ಕೇಳುತ್ತದೆ. ವಿವರ ನೀಡಿದ ಬಳಿಕ ಇಂತಿಷ್ಟು ಸಮಯಕ್ಕೆ ದುಡ್ಡು ನಿಗದಿಪಡಿಸುತ್ತದೆ. ಸೆಲೆಕ್ಟ್ ಮಾಡಿ ದುಡ್ಡು ಜಮೆ ಮಾಡಿದರೆ, ಆ ಆಪ್​ಗಳಲ್ಲಿ ನಿಮ್ಮ ನಿಮ್ಮ ಪ್ರೊಫೈಲ್​ಗೆ ಯುವಕ, ಯುವತಿಯರು ಸಂದೇಶ ಕಳಿಸುತ್ತಾರೆ. ನಂತರ ಇಬ್ಬರೂ ನಂಬರ್ ಬದಲಾಯಿಸಿಕೊಂಡು ಚಾಟಿಂಗ್ ಮುಂದುವರಿಸಬಹುದು.

ಲಿವ್ ಇನ್ ರಿಲೇಷನ್​ಶಿಪ್ ಹೆಸರಿನಲ್ಲಿ ಯುವತಿಯರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳು ದುಪ್ಪಟ್ಟಾಗುತ್ತಿವೆ.

-ರಾಣಿ ಶೆಟ್ಟಿ-ಮುಖ್ಯಸ್ಥೆ, ವನಿತಾ ಸಹಾಯವಾಣಿ

ಸುಪ್ರೀಂ ಏನೇಳಿದೆ?

*ಲಿವ್ ಇನ್ ಸಂಬಂಧ ಹೊಂದುವವರಿಬ್ಬರೂ ಅವಿವಾಹಿತರಾಗಿರಬೇಕು.

*ಗಂಡು-ಹೆಣ್ಣಿನ ನಡುವಿನ ಸಂಬಂಧ ಸಮಾಜದಲ್ಲಿ ಪಾರದರ್ಶಕವಾಗಿರಬೇಕು.

*ಇಬ್ಬರೂ ಪ್ರಾಪ್ತ ವಯಸ್ಕರಾಗಿರಬೇಕು. ಒಂದೇ ಮನೆಯಲ್ಲಿ ಜತೆಗಿರಬೇಕು.

* ಇಬ್ಬರ ನಡುವೆ ಉತ್ತಮ ಹೊಂದಾಣಿಕೆ, ದೀರ್ಘ ಕಾಲದ ಸಂಬಂಧವಾಗಿರಬೇಕು.

*ಆಗಾಗ ಭೇಟಿ, ಹಣದ ವ್ಯವಹಾರ ನಡೆಸಿ ಜತೆಗಿದ್ದರೆ ಲಿವ್ ಇನ್ ಸಂಬಂಧ ಆಗಲ್ಲ.

ಲಿವ್ ಇನ್ ಸಂಬಂಧ ಸಾಬೀತುಪಡಿಸುವಂಥ ಬ್ಯಾಂಕ್ ಖಾತೆ ವಿವರ, ಬಾಡಿಗೆ ಕರಾರು ಪತ್ರ ಸೇರಿ ಕೆಲ ದಾಖಲೆಗಳನ್ನು ಜತೆಗಿಟ್ಟುಕೊಳ್ಳಬೇಕು. ಇಲ್ಲವಾದರೆ ದೂರವಾದ ಬಳಿಕ ಮದುವೆಯಾಗುವುದಾಗಿ ನಂಬಿಸಿ ವಂಚನೆ ಅಥವಾ ಅತ್ಯಾಚಾರದಂಥ ಸುಳ್ಳು ಪ್ರಕರಣ ದಾಖಲಿಸುವ ಸಾಧ್ಯತೆ ಇರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಗಂಡಸರೇ ಬಲಿಪಶುಗಳಾಗುತ್ತಾರೆ.

| ರಾಜರಾಜೇಶ್ವರಿ-ವಕೀಲರು, ಫ್ಯಾಮಿಲಿ ಕೋರ್ಟ್

ಸಹಜೀವನಕ್ಕೆ ಕಾರಣಗಳೇನು?

# ವಿವಾಹಪೂರ್ವದಲ್ಲೇ ಪರಸ್ಪರ ಅರಿತುಕೊಳ್ಳಬೇಕೆಂಬ ನೆಪ, ಸಾಮಾಜಿಕ ಜಾಲತಾಣಗಳ ಮೂಲಕ ಡೇಟಿಂಗ್​ಗೆ ಪ್ರಚೋದನೆ,

# ಆಕರ್ಷಣೆ, ಆರ್ಥಿಕ ಸಾಮರ್ಥ್ಯ ಪರೀಕ್ಷೆ

ಸಂಬಂಧ ಕಡಿಯಲು ಕಾರಣಗಳು
# ವಂಚನೆಗೊಳಗಾದ ಯುವತಿ ದೂರು ನೀಡಿದರೆ ಐಪಿಸಿ ಸೆಕ್ಷನ್ 420 (ವಂಚನೆ) ಪ್ರಕರಣ ದಾಖಲಾಗುತ್ತದೆ. ಈ ಕೇಸಲ್ಲಿ ಸುಲಭವಾಗಿ ಜಾಮೀನು ಸಿಗುತ್ತದೆ.

# ದೈಹಿಕ ಸಂಪರ್ಕದ ಆಕರ್ಷಣೆ ಮುಗಿದ ಬಳಿಕ ವೈರಾಗ್ಯ ಕಾನೂನಿನ ಆತಂಕ ಇರದಿರುವುದು, ಮಾಹಿತಿ ಕೊರತೆ ಹೊಸಬರೆಡೆಗಿನ ಆಕರ್ಷಣೆ

ಅವನ ಮಾತ್ಕೇಳಿ ಇವಳ ಬಿಟ್ಟ!
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಬಿಟಿಎಂ ಲೇಔಟ್​ನ 26 ವರ್ಷದ ಯುವತಿಗೆ 2018 ಜನವರಿಯಲ್ಲಿ ಡೇಟಿಂಗ್ ಆಪ್ ಮೂಲಕ ಯುವಕನ ಪರಿಚಯವಾಗಿತ್ತು. 27 ವರ್ಷದ ಆಂಧ್ರ ಮೂಲದ ಆ ಯುವಕ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಚಾಟಿಂಗ್ ಆರಂಭಿಸಿದ್ದ ಈ ಜೋಡಿ ಕೊನೆಗೆ ಒಟ್ಟಿಗೆ ವಾಸವಿರುವ ತೀರ್ವನಕ್ಕೆ ಬಂದಿತ್ತು. ಮೈಸೂರು, ತಮಿಳುನಾಡು, ಆಂಧ್ರಪ್ರದೇಶದಲ್ಲೆಲ್ಲ ಸುತ್ತಾಡಿ ದೈಹಿಕ ಸಂಪರ್ಕವನ್ನೂ ಹೊಂದಿದ್ದರು. ವರ್ಷದ ತರುವಾಯ ಯುವಕ ತನ್ನ ಸ್ನೇಹಿತನಿಗೆ ಯುವತಿ ಫೋಟೋ ತೋರಿಸಿದ್ದ. ಆಗ ಆತ, ಈ ಯುವತಿ ಡೇಟಿಂಗ್ ಆಪ್​ನಲ್ಲಿ ಪರಿಚಯವಾಗಿ ಕೆಲ ಯುವಕರ ಜತೆ ಆತ್ಮೀಯವಾಗಿದ್ದಳೆಂಬ ಸಂಗತಿ ತಿಳಿಸಿದ್ದ. ಈ ವಿಚಾರ ಗೊತ್ತಾದ ಬಳಿಕ ಯುವಕ ಆಕೆಯಿಂದ ದೂರವಿರತೊಡಗಿದ. ಆದರೆ, ಆಕೆ ವಿವಾಹವಾಗುವಂತೆ ಬೆನ್ನುಹತ್ತಿದ್ದಳು. ಆತ ಒಪ್ಪದಿದ್ದಾಗ ಯುವತಿ ಮಹಿಳಾ ಸಹಾಯವಾಣಿ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.

ಪಾಲಕರಿಗೇ ಅಶ್ಲೀಲ ವಿಡಿಯೋ ಕಳಿಸಿದ!

ಉತ್ತರ ಭಾರತ ಮೂಲದ 22 ವರ್ಷದ ಯುವತಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಳು. 2018 ಮಾರ್ಚ್​ನಲ್ಲಿ ಸ್ನೇಹಿತೆ ಮನೆಗೆ ಪಾರ್ಟಿಗೆ ಹೋಗಿದ್ದಾಗ ಅಲ್ಲಿಗೆ ಬಂದಿದ್ದ 31 ವರ್ಷದ ಟೆಕ್ಕಿ ಪರಿಚಯವಾಗಿತ್ತು. ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಚಾಟಿಂಗ್ ಮಾಡುತ್ತಿದ್ದರು. ಕೊನೆಗೆ ಇಬ್ಬರೂ ಅಪಾರ್ಟ್​ವೆುಂಟ್​ನಲ್ಲಿ ಲಿವ್​ಇನ್ ರಿಲೇಷನ್​ಶಿಪ್​ನಲ್ಲಿದ್ದರು. ವ್ಯಾಸಂಗ ಮುಗಿದ ಬಳಿಕ ಯುವತಿ ತನ್ನ ಊರಿಗೆ ವಾಪಸಾಗಿದ್ದಳು. ಆದರೆ, ಯುವಕ ತನ್ನನ್ನು ವಿವಾಹವಾಗುವಂತೆ ಆಕೆ ಹಿಂದೆ ಬಿದ್ದಿದ್ದ. ಆದರೆ, ಆಕೆ ನಿರಾಕರಿಸಿದ್ದಳು. ಇಬ್ಬರೂ ಏಕಾಂತದಲ್ಲಿದ್ದಾಗ ಮೊಬೈಲ್​ನಲ್ಲಿ ತೆಗೆದಿದ್ದ ವಿಡಿಯೋವನ್ನು ಯುವತಿಗೆ ಕಳಿಸಿ ಮದುವೆಯಾಗುವಂತೆ ಬೆದರಿಕೆ ಹಾಕಿದ್ದ. ಆಕೆ ಬಗ್ಗದಿದ್ದಾಗ ಕುಪಿತಗೊಂಡ ಯುವಕ ಆಕೆಯ ಪಾಲಕರಿಗೂ ವಿಡಿಯೋ ಕಳುಹಿಸಿದ್ದ. ಪಾಲಕರು ಆತನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಕೇಸ್ ನಂ.3 ಭ್ರೂಣ ತೆಗೆಸಿ ಕೈಕೊಟ್ಟ!

ಬೆಂಗಳೂರಿನಲ್ಲಿ ವಾಸವಿರುವ 31 ವರ್ಷದ ಮಹಿಳೆಗೆ 2015ರಲ್ಲಿ ಸ್ನೇಹಿತನ ಮುಖಾಂತರ ವಿವಾಹಿತ ವಾಮಂಡ್ ಚಾರ್ಲ್ಸ್ ಎಂಬಾತನ ಪರಿಚಯವಾಗಿತ್ತು. 2017ರಲ್ಲಿ ಮದುವೆಯಾಗುವುದಾಗಿ ಇಬ್ಬರೂ ಲಿವಿಂಗ್ ಟುಗೆದರ್ ವಾಸವಿದ್ದರು. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಗರ್ಭಿಣಿಯಾಗಿರುವ ವಿಚಾರ ಗೊತ್ತಾದಾಗ ಈಗಲೇ ಮಗು ಬೇಡ ಎಂದು ತಾನೇ ಕರೆದೊಯ್ದು ಗರ್ಭಪಾತ ಮಾಡಿಸಿದ್ದ. ಈ ಮಧ್ಯೆ ಮತ್ತೊಬ್ಬ ಯುವತಿ ಜತೆ ಸಲುಗೆ ಬೆಳೆಸಿಕೊಂಡಿದ್ದ. ಮದುವೆಯಾಗುವಂತೆ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಕೊನೆಗೆ ಆ ಮಹಿಳೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕೇಸ್ ನಂ.4 ಅವಳಿಗಾಗಿ ಇವಳಿಗೆ ಕೈಕೊಟ್ಟ!

ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ 27 ವರ್ಷದ ಯುವಕ 2017 ಜೂನ್​ನಲ್ಲಿ ಫೇಸ್​ಬುಕ್​ನಲ್ಲಿ ಉತ್ತರ ಭಾರತದ ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಆಕೆ ಈತನ ಮನವಿಯನ್ನು ಸ್ವೀಕರಿಸಿದ್ದಳು. ಕೆಲ ಸಮಯ ಚಾಟಿಂಗ್ ಮಾಡಿದ ಬಳಿಕ ಯುವಕನ ಒತ್ತಾಯದ ಮೇರೆಗೆ ಜತೆಯಾಗಿ ಸಹಜೀವನ ನಡೆಸಲು ನಿರ್ಧರಿಸಿದ್ದರು. ಯುವತಿ ತನ್ನ ಪಾಲಕರನ್ನು ತೊರೆದು ಬೆಂಗಳೂರಿಗೆ ಬಂದು ಈತನೊಂದಿಗೆ ಕೋರಮಂಗಲದಲ್ಲಿ ವಾಸವಿದ್ದಳು. ಆದರೆ, 2018 ಡಿಸೆಂಬರ್​ನಲ್ಲಿ ಆತ ಬೇರೊಬ್ಬ ಯುವತಿ ಜತೆ ಓಡಾಡಲು ಆರಂಭಿಸಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಈಕೆಯನ್ನು ತೊರೆದು ಮತ್ತೊಬ್ಬ ಯುವತಿ ಜತೆ ವಾಸಿಸತೊಡಗಿದ. ಯುವಕನ ಮಾತು ಕೇಳಿ ತನ್ನ ಪಾಲಕರನ್ನು ಬಿಟ್ಟು ಓಡಿಬಂದ ಆ ಯುವತಿಗೆ ಈಗ ದಿಕ್ಕಿಲ್ಲದಂತಾಗಿದೆ. ನ್ಯಾಯ ಕೋರಿ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾಳೆ.