ವಾಸಿಸಲು ಹಕ್ಕು ಪತ್ರಕ್ಕಾಗಿ ಕಾರ್ಮಿಕರ ಪ್ರತಿಭಟನೆ

ಬೆಳಗಾವಿ: ನಗರದಲ್ಲಿ ಪೌರಕಾರ್ಮಿಕರ ಬಡಾವಣೆಗಳಲ್ಲಿ ವಾಸಿಸಲು ಕಾರ್ಮಿಕರಿಗೆ ಕಾಯಂ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೌರಕಾರ್ಮಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರಿಗೆ ವಾಸವಾಗಿರುವಂಥ ವಸತಿ ಗೃಹಗಳನ್ನು ಏಳು ದಿನಗಳಲ್ಲಿ ತೆರವುಗೊಳಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ, ಪೌರಕಾರ್ಮಿಕರು ವಾಸವಿರುವ 40 ವಸತಿ ಗೃಹಗಳು ಶಿಥಿಲಗೊಂಡಿದ್ದು, ಅಪಾಯದ ಅಂಚಿನಲ್ಲಿವೆ ಪರ್ಯಾಯ ವ್ಯವಸ್ಥೆ ಮಾಡುವಂತೆ 9 ವರ್ಷಗಳಿಂದ ಸಂಬಂಧಪಟ್ಟವರಿಗೆ ತಿಳಿಸಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ವಸತಿ ಗೃಹಗಳಲ್ಲಿ ವಾಸಿಸುವ ಪೌರಕಾರ್ಮಿಕರಿಗೆ ಹಕ್ಕು ಪತ್ರ ನೀಡದೆ ವಿನಾಕಾರಣ ನೋಟಿಸ್ ನೀಡುತ್ತಿದ್ದಾರೆ. ಆ ಶಿಥಿಲಗೊಂಡಿರುವ ವಸತಿಗೃಹಗಳನ್ನು ದುರಸ್ತಿಪಡಿಸಿಲ್ಲ. ಆದರೆ, ನಮ್ಮ ಸಂಬಳದಲ್ಲಿ ಅದರ ಬಾಡಿಗೆ ಕಡಿತಗೊಳಿಸುತ್ತಿದ್ದಾರೆ.

ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯ ಪಾಲಿಕೆಯಲ್ಲಿ ಹಕ್ಕು ಪತ್ರ ನೀಡಿದಂತೆ ನಮಗೂ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ದುರ್ಗೇಶ ಮೈತ್ರಿ, ಕಲ್ಲಪ್ಪ ಮಡಿವಾಳರ, ಕಲಾವತಿ ಕಾಂಬಳೆ ಸೇರಿ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *