ಅಂತಿಮ ಟೆಸ್ಟ್​ ಡ್ರಾನಲ್ಲಿ ಅಂತ್ಯ: ಆಸಿಸ್​ ನೆಲದಲ್ಲಿ ಮೊದಲ ಟೆಸ್ಟ್​ ಸರಣಿ ಗೆದ್ದ ಭಾರತ

ಸಿಡ್ನಿ: ಪ್ರವಾಸಿ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯವೂ ಡ್ರಾನಲ್ಲಿ ಅಂತ್ಯವಾಗಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಆಸಿಸ್​ ನೆಲದಲ್ಲಿ ಟೆಸ್ಟ್​ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ ಆಡಿದ ಭಾರತ 7 ವಿಕೆಟ್​ ನಷ್ಟಕ್ಕೆ 622 ರನ್​​ ಗಳಿಸಿ, ಡಿಕ್ಲೇರ್​ ಘೋಷಿಸಿಕೊಂಡಿತ್ತು. ತಂಡದ ಪರ ಮಯಾಂಕ್​ ಅಗರ್​ವಾಲ್​(77), ಚೇತೇಶ್ವರ ಪೂಜಾರ(193) ಹನುಮ ವಿಹಾರಿ(42), ರಿಷಭ್​ ಪಂತ್​(159*) ಹಾಗೂ ರವೀಂದ್ರ ಜಡೇಜಾ(81) ಅಮೋಘ ಆಟ ಪ್ರದರ್ಶನ ನೀಡಿದ್ದರು.

ಆಸಿಸ್​ ಪರ ನ್ಯಾಥನ್​ ಲ್ಯಾನ್​ 4 ವಿಕೆಟ್​ ಪಡೆದು ಮಿಂಚಿದರೆ, ಜೋಶ್​ ಹಜಾಲ್​ವುಡ್​ 2 ಹಾಗೂ ಮಿಚೆಲ್​ ಸ್ಟಾರ್ಕ್​ 1 ವಿಕೆಟ್​ ಪಡೆದರು.

ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ ಆಸಿಸ್​ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ ಸರ್ವಪತನ ಕಂಡು 300 ರನ್​ ಗಳಿಸಿತ್ತು. ತಂಡದ ಪರ ಮಾರ್ಕಸ್​ ಹ್ಯಾರಿಸ್​(79) ಮಾರ್ನಸ್ ಲ್ಯಾಬಸ್ಚ್ಯಾಗ್ನೆ(38) ಹಾಗೂ ಪೀಟರ್​ ಹ್ಯಾಂಡ್ಸ್​​ಕಂಬ್​(37) ರನ್​ ಗಳಿಸಿದ್ದನ್ನು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸಮನ್​ ಉತ್ತಮ ನಿರ್ವಹಣೆ ತೋರಲಿಲ್ಲ. ಇದರಿಂದಾಗಿ 322ರನ್​ ಹಿನ್ನಡೆ ಅನುಭವಿಸಿದ ಆಸಿಸ್​ ಪಡೆ ಫಾಲೋ ಆನ್​ಗೆ ಒಳಗಾಯಿತು.

ಟೀಂ ಇಂಡಿಯಾ ಪರ ಕುಲದೀಪ್​ ಯಾದವ್​ 5 ವಿಕೆಟ್​ ಪಡೆದು ಮಿಂಚಿದರೆ, ಮಹಮ್ಮದ್​ ಶಮಿ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್​ ಪಡೆದರು. ಉಳಿದಂತೆ ಜಸ್ಪ್ರೀತ್​​ ಬೂಮ್ರಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು.

ಫಾಲೋ ಆನ್​ಗೆ ಒಳಗಾಗಿ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಆಸಿಸ್​ ಪಡೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್​ ನಷ್ಟವಿಲ್ಲದೇ 6 ರನ್​ ಗಳಿಸಿ, ಐದನೇ ದಿನದಾಟವನ್ನು ಕಾಯ್ದುಕೊಂಡಿತ್ತು. ಆದರೆ, ಐದನೇ ದಿನದಾಟಕ್ಕೆ ವರುಣ ಅಡ್ಡಿಯಾದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಗುವ ಮೂಲಕ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು ಲಭಿಸಿತು. (ಏಜೆನ್ಸೀಸ್​)‘

ಭಾರತಕ್ಕೆ ಚಾರಿತ್ರಿಕ ದಿಗ್ವಿಜಯ ನಿಶ್ಚಿತ