ತೇರದಾಳ: ಭಾರತದ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದು ಬನಹಟ್ಟಿ ಎಸ್‌ಟಿಸಿ ಕಾಲೇಜಿನ ನಿವೃತ್ತ ಗ್ರಂಥಪಾಲಕ ವೈ.ಬಿ. ಕೊರಡೂರ ಹೇಳಿದರು.
ತಾಲೂಕಿನ ಸಸಾಲಟ್ಟಿಯ ಜ್ಞಾನಯೋಗಿ ಪಿಯು ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಹಾಗೂ ಪಿಯು ಪ್ರಥಮ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದೊಂದಿಗೆ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿಹಿಡಿಯುವ ಪರಂಪರೆಯು ಮುಂದಿನ ಜನಾಂಗಕ್ಕೆ ನೀಡುವ ಕೊಡುಗೆಯಾಗಿದೆ. ಕಾಲೇಜಿನ ವಾತಾವರಣ ಹಾಗೂ ವಿದ್ಯಾರ್ಥಿಗಳ ವೇಷಭೂಷಣಗಳು ಇಲ್ಲಿನ ಸಂಸ್ಕೃತಿ ಎತ್ತಿತೋರಿಸುವಂತಿದೆ ಹೇಳಿದರು.
ಡಾ. ಸುರೇಶ ಸಲಬನ್ನವರ, ಮಗಯ್ಯ ಹಿರೇಮಠ ಮಾತನಾಡಿ, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಂಸ್ಥೆ ಪ್ರಾರಂಭಿಸಲಾಗಿದ್ದು, ಈಗ ಉತ್ತಮವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ವಿದ್ಯಾರ್ಥಿಗಳು ಶಿಸ್ತು, ಸಂಯಮ, ಹಿರಿಯರಲ್ಲಿ ವಿಧೇಯತೆ, ವಿನಯತೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಮಹಾಲಿಂಗ ಶೇಗುಣಸಿ ಅಧ್ಯಕ್ಷತೆ ವಹಿಸಿದ್ದರು.
ಅನ್ನಪೂರ್ಣ ಕೊರಡೂರ, ಸುರೇಂದ್ರ ಪಾಟೀಲ, ರಾಜಶೇಖರ ಜಲಪೂರ, ಜಕ್ಕಪ್ಪ ಜಲಪೂರ, ಮುತ್ತಪ್ಪ ಕಾಪಶಿ, ಮಗಯ್ಯ ಹಿರೇಮಠ, ಬನಪ್ಪ ಬೆವನೂರ ಇತರರಿದ್ದರು.