ನವದೆಹಲಿ: ಈ ಕರೊನಾ ಸಂಕಷ್ಟದ ಕಾಲದಲ್ಲಿ ಎಲ್ಲರೂ ಸಹಾಯಕ್ಕೆ ಮುಂದಾಗಿದ್ದಾರೆ. ಬಹಳಷ್ಟು ಮಂದಿ ತಮ್ಮದೇ ಆದ ರೀತಿಯಲ್ಲಿ, ತಮ್ಮಿಂದಾದ ನೆರವು ಸೋಂಕಿತರಿಗೆ ಹಾಗೂ ಕರೊನಾದಿಂದ ಸಂತ್ರಸ್ತರಾದವರಿಗೆ ನೀಡುತ್ತಲೇ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ಆರು ವರ್ಷದ ಬಾಲಕ ಕರೊನಾ ಸೋಂಕಿತರಿಗೆ ‘ಅಕ್ಷರಶಃ ಖುಷಿ’ ಹಂಚುವ ಮೂಲಕ ಗಮನ ಸೆಳೆದಿದ್ದಾನೆ.
ಹೀಗೆ ಕರೊನಾ ಸೋಂಕಿತರ ಬಯಸುತ್ತಿರುವ ಈ ಬಾಲಕ ನೆಟ್ಟಿಗರ ಮೆಚ್ಚುಗೆಗೂ ಪಾತ್ರನಾಗಿದ್ದಾನೆ. ಮಧ್ಯಪ್ರದೇಶದ ಭೋಪಾಲ್ನ ಆದ್ವಿಕ್ ಗೌತಮ್ ಎಂಬ ಈ ಬಾಲಕನ ಈ ಮುಗ್ಧ ಪ್ರೀತಿ-ಕಾಳಜಿ ವ್ಯಕ್ತಪಡಿಸುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಅದನ್ನು ಲೈಕ್ ಮಾಡಿ, ಶೇರ್ ಮಾಡಿ ಬಾಲಕನ ಕುರಿತ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!
ಈ ಬಾಲಕನ ತಾಯಿ ಕೋವಿಡ್ ಸೋಂಕಿತರಿಗಾಗಿ ಊಟ ತಯಾರಿಸಿ ಅದನ್ನು ಪೊಟ್ಟಣಗಳಲ್ಲಿ ತುಂಬಿ ವಿತರಿಸುತ್ತಿದ್ದಾರೆ. ಹೀಗೆ ಪ್ರತಿ ಪೊಟ್ಟಣದ ಮೇಲಿನ ತೆಳು ರಟ್ಟಿನ ಮೇಲೆ ಈ ಬಾಲಕ ತನ್ನ ಹಸ್ತಾಕ್ಷರದಲ್ಲಿ ‘ಖುಷ್ ರಹಿಯೆ’ (ಖುಷಿಯಾಗಿರಿ) ಎಂದು ಬರೆದಿದ್ದಾನೆ. ಬಾಲಕ ಹೀಗೆ ಬರೆದಿರುವುದು ಆ ಊಟ ತಿನ್ನುವ ಸೋಂಕಿತರಿಗಷ್ಟೇ ಅಲ್ಲ, ಆ ಫೋಟೋ ನೋಡುವ ನೆಟ್ಟಿಗರಿಗೂ ಖುಷಿ ಕೊಡುವಂತಿದೆ. (ಏಜೆನ್ಸೀಸ್)