ತೇರದಾಳ: ಸಾಹಿತ್ಯ ನಾಡಿನ ದೊಡ್ಡ ಆಸ್ತಿ. ಸಾಹಿತಿಕಾರರು ಸಂಸ್ಕಾರದೊಂದಿಗೆ ಮೌಲ್ಯಗಳ ಜೋಡಣೆ ಮಾಡುತ್ತ ಬಂದಿದ್ದಾರೆ ಎಂದು ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಕ್ಷೇತ್ರಾಧಿಪತಿ ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಶನಿವಾರ ಹಮ್ಮಿಕೊಂಡ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, ನಾಡಿನ ಅಧ್ಯಾತ್ಮ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಅನಾದಿ ನಿರಂಜನ ಅಲ್ಲಮಪ್ರಭು ದೇವರು ನಡೆದ ನೆಲದಲ್ಲಿ ಸಂಭ್ರಮದ ಕ್ಷಣ ಇದಾಗಿದೆ. ಚಾಮರಸರದ್ದು ಸತ್ತವರ ಕಥೆಯಲ್ಲ, ಆತ್ಮಪ್ರಭೆ ಜೀವಂತ ಕಥನವಾಗಿತ್ತು ಎಂಬ ಪ್ರಭುಗಳ ಜ್ಞಾನದ ಶಕ್ತಿಯನ್ನು ವರ್ಣಿಸಿದರು. ಸಿದ್ಧೇಶ್ವರ ಅಪ್ಪಗಳು ಪ್ರಭುವಿನ ವಚನಗಳನ್ನು ಗಹನವಾಗಿ ನಿರ್ವಚನ ಮಾಡಿದರು ಎಂದರು.
ಹಿರಿಯ ಜಾನಪದ ಸಾಹಿತಿ ಡಾ.ಶಂಭು ಬಳಗಾರ ಮಾತನಾಡಿ, ಮಾಯೆಯನ್ನು ಸರಿಸಿ ಜ್ಞಾನ ನೀಡುವ ಅಲ್ಲಮನ ಕಾರ್ಯದ ಪ್ರಭೆ ಇಲ್ಲಿ ಬೆಳಗುತ್ತಿದೆ. ಕೌಟುಂಬಿಕ ಬದುಕನ್ನು ಜಾನಪದ ಶೈಲಿಯಲ್ಲಿ ಪ್ರತಿಪಾದಿಸಿ, ಜಾನಪದ ಹಾಡುಗಳ ಮೂಲಕ ಭಕ್ತರ ಮನಸೆಳೆದರು.
ಜಮಖಂಡಿ ಓಲೆಮಠದ ಲಿಂ.ಪೂಜ್ಯರು ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಇರಬೇಕಾಗಿರುವುದನ್ನು ಸ್ಮರಿಸಿದ ಅವರು, ಅಧ್ಯಯನಶೀಲ ಹಿರಿಯ ಸಂತ ಅವರಾಗಿದ್ದರು ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಲೋಕದ ಜನರ ಬದುಕಿನಲ್ಲಿರುವ ಮೌಢ್ಯಕ್ಕೆ ಮುಕ್ತಿ ನೀಡಿದ ಅಲ್ಲಮರ ಕ್ಷೇತ್ರದ ಕಾರ್ಯಕ್ರಮವು ನಾಡಿನಾದ್ಯಂತ ಹೆಸರಾಗುತ್ತಿದೆ. ಹಿರಿಯರ ಸಂಸ್ಕಾರದಂತೆ ಮನೆಯ ವಾತಾವರಣವಿದ್ದು, ಮೌಲ್ಯಯುತ ಬದುಕು ಸಾಗಿಸಲು ಸಲಹೆ ನೀಡಿದರು.
ಅರಭಾವಿ ಗುರುಬಸವಲಿಂಗ ಸ್ವಾಮೀಜಿ, ಹಂದಿಗುಂದದ ಶಿವಾನಂದ ಶ್ರೀಗಳು, ಡಾ.ಮಹಾಂತಪ್ರಭು ಸ್ವಾಮಿಗಳು, ಚಿಮ್ಮಡದ ಪ್ರಭು ಶ್ರೀಗಳು, ಬೆಂಗಳೂರಿನ ಬಸವಚೇತನ ಶ್ರೀಗಳು, ಶಾಸಕ ಸಿದ್ದು ಸವದಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ ಅನೇಕರು ಇದ್ದರು.