ಸಿದ್ದಾಪುರ: ದಡ್ಡರನ್ನು ಬುದ್ದಿವಂತರನ್ನಾಗಿಸುವ ಮತ್ತು ಸಾವನ್ನು ಮುಂದೂಡುವ ಶಕ್ತಿ ಇರುವುದು ಸಾಹಿತ್ಯಕ್ಕೆ. ಅದಕ್ಕೆ ಸೋಲೆಂಬುದು ಇಲ್ಲ ಎಂದು ಸಾಹಿತಿ ಡಾ. ಸರ್ಪ್ರಾಜ್ ಚಂದ್ರಗುತ್ತಿ ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಆಯೋಜಿಸಿದ್ದ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಸ್ಕೃತಿ, ಕಲೆ ಈ ನೆಲದಲ್ಲಿ ಸಾಮರಸ್ಯ ಮೂಡಿಸುವ ಕೆಲಸವಾಗುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ಹೆಸರುಗಳಲ್ಲಿ ಸಿದ್ದಾಪುರವೂ ಒಂದು ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ, ಸಾಹಿತ್ಯದ ಓದು ಮನಸನ್ನು ವಿಶಾಲವಾಗಿಸುತ್ತದೆ. ದಿನದ ಒಂದು ಗಂಟೆಯಾದರೂ ಓದಿಗೆ ಮೀಸಲಿಡಬೇಕು. ಮುಖ್ಯವಾಗಿ ಶಿಕ್ಷಕರು ತಮ್ಮ ಪಠ್ಯಗಳಿಗಷ್ಟೇ ಸೀಮಿತವಾಗದೇ ಇತರ ಕೃತಿಗಳನ್ನು ಅಧ್ಯಯನ ಮಾಡುವಂತಾಗಬೇಕು. ನಮ್ಮ ತಾಲೂಕಿನಲ್ಲಿದ್ದ ತಿಕಳಾರಿ ಭಾಷೆ ನಶಿಸಿಹೋಗಿದೆ. ರಸೌಷಧಿ ನೀಡುವ ವೈದ್ಯ ಪದ್ಧತಿ ನಿಧಾನವಾಗಿ ನಶಿಸುತ್ತಿದೆ. ಅವನ್ನು ಉಳಿಸಿಕೊಳ್ಳುವಲ್ಲಿ ನಾವೆಲ್ಲ ಮುಂದಾಗಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಅಧ್ಯಕ್ಷತೆ ವಹಿಸಿದ್ದರು. ಆಶಾಕಿರಣ ಟ್ರಸ್ಟ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ, ಲಯನ್ಸ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ, ಹಿರಿಯ ಸಾಮಾಜಿಕ ಪ್ರಮುಖ ವಿ.ಎನ್. ನಾಯ್ಕ ಉಪಸ್ಥಿತರಿದ್ದರು.
ಗೌರವ ಪುರಸ್ಕೃತ ಸಾಧಕರನ್ನು ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಅಭಿನಂದಿಸಿ ಮಾತನಾಡಿದರು.
ಗೌರವ ಪುರಸ್ಕಾರ: ಎ.ಜಿ. ಶೇಖ್ (ಸೈನಿಕಸೇವೆ), ಶಾಂತಾ ನಿಲೇಕಣಿ (ಸಂಗೀತ), ರೀಟಾ ಡಿಸೋಜ ( ಶಿಕ್ಷಣ), ಸತೀಶ ದಂಟಕಲ್(ಯಕ್ಷಗಾನ), ವಿಶ್ವನಾಥ ಹೆಗಡೆ ನಿರಗಾರ ( ನಾಟಿ ವೈದ್ಯ), ಎಸ್.ಜಿ.ಭಟ್ಟ (ಶಿಲ್ಪಕಲೆ), ನಾಗರಾಜ ಭಟ್ಟ ಕೆಕ್ಕಾರ (ಮಾಧ್ಯಮ), ಸಿ.ಕೆ. ಸತೀಶ (ಚಿತ್ರಕಲೆ), ಮೋಹನ ಗಣಪ ನಾಯ್ಕ (ಮೂಡಲಪಾಯ), ಡಿ.ಕೆ. ನಾಯ್ಕ ತೆಂಗಿನ್ಮನೆ ( ಕೃಷಿ), ಮಹಾಬಲೇಶ್ವರ ನಾಯ್ಕ ಮನ್ಮನೆ(ಸಾರಿಗೆ), ಸರಸ್ವತಿ ಈಶ್ವರ ನಾಯ್ಕ ಹಸುವಂತೆ (ಹಸೆಚಿತ್ತಾರ) ಗೌರವ ಪುರಸ್ಕಾರ ನೀಡಲಾಯಿತು.
ಚಂದ್ರಶೇಖರ ಕುಂಬ್ರಿಗದ್ದೆ ಸ್ವಾಗತಿಸಿದರು. ಪ್ರಶಾಂತ ಹೆಗಡೆ ಭುವನಗಿರಿ ನಿರ್ಣಯ ಮಂಡಿಸಿದರು. ನಾಗರಾಜ ಮಂಡಿವಾಳ ವಂದಿಸಿದರು. ಪೂರ್ಣಿಮಾ ಜನಕ ನಾಯ್ಕ ನಿರ್ವಹಿಸಿದರು.