ಶಿವಮೊಗ್ಗ: ಗೋಪಶೆಟ್ಟಿಕೊಪ್ಪ ಸಾಹಿತ್ಯ ಗ್ರಾಮದ ಅಡಿಗಲ್ಲು ಸಮಾರಂಭದ ಶಿಲಾನ್ಯಾಸ ಫಲಕ ಉದ್ಘಾಟನೆ ವೇಳೆಗೆ ನಾಪತ್ತೆಯಾಗಿದೆ. ಇದನ್ನು ಹುಡುಕಿ ಉದ್ಘಾಟನಾ ಕಾರ್ಯಕ್ರಮದ ಫಲಕದೊಂದಿಗೆ ಹಾಕಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಎಸ್.ಶಿವಮೂರ್ತಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಸಾಹಿತ್ಯ ಗ್ರಾಮ ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರ ಪರಿಶ್ರಮದ ಫಲ. ಆದರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಅಡಿಗಲ್ಲು ಸಮಾರಂಭದ ಫಲಕವನ್ನೇ ಉಪೇಕ್ಷಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2006ರಲ್ಲಿ ಶಿವಮೊಗ್ಗದಲ್ಲಿ ಆಯೋಜಿಸಿದ್ದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷರಾಗಿದ್ದ ಡಿ.ಮಂಜುನಾಥ್, ಸಾಹಿತ್ಯ ಗ್ರಾಮದ ಪರಿಕಲ್ಪನೆಯನ್ನು ಪರಿಷತ್ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದರು. ಅಂದಿನಿಂದ ಅವರು ಸತತವಾಗಿ ಈ ಯೋಜನೆಯ ಅನುಷ್ಟಾನಕ್ಕೆ ಶ್ರಮಿಸಿದ್ದರು ಎಂದು ಶಿವಮೂರ್ತಿ ವಿವರಿಸಿದರು.
2011ರಲ್ಲಿ ಸಾಹಿತ್ಯ ಗ್ರಾಮದ ಅಡಿಗಲ್ಲು ಸಮಾರಂಭ ನಡೆಯಿತು. ಅಂದಿನ ಸಿಎಂ ಡಿ.ವಿ.ಸದಾನಂದ ಗೌಡ ಇದರಲ್ಲಿ ಭಾಗವಹಿಸಿದ್ದರು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳ ಹೆಸರನ್ನು ಶಿಲಾನ್ಯಾಸ ಫಲಕದಲ್ಲಿ ಹಾಕಲಾಗಿತ್ತು. ಆದರೆ ಈಗ ಆ ಫಲಕವೇ ಕಣ್ಮರೆಯಾಗಿದೆ ಎಂದು ಹೇಳಿದರು.
ಕೇಂದ್ರ ಸಮಿತಿಯ ಬೈಲಾ ಉಲ್ಲಂಘಿಸಿ ಸಾಹಿತ್ಯ ಗ್ರಾಮದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ. ಉದ್ದೇಶಪೂರ್ವಕವಾಗಿ ಹಿಂದಿನ ಸಮಿತಿಯನ್ನು ಕಾರ್ಯಕ್ರಮದಿಂದ ದೂರ ಇಡಲಾಯಿತು ಎಂದು ಶಿವಮೂರ್ತಿ ಆರೋಪಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ಟಿ.ಕೃಷ್ಣಪ್ಪ, ಪ್ರಮುಖರಾದ ಯು.ಮಧುಸೂದನ ಐತಾಳ್, ಭೈರಾಪುರ ಶಿವಪ್ಪ ಮೇಷ್ಟ್ರು, ಎಸ್.ಎಲ್.ವಿನೋದ, ಮಮತಾ ಶಿವಣ್ಣ, ಕೆ.ರಾಮಚಂದ್ರ ಇದ್ದರು.