ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗ್ತಿವೆ ಲಕ್ಷ ರೊಟ್ಟಿ!

ಮಲ್ಲು ಕಳಸಾಪುರ ಲಕ್ಷ್ಮೇಶ್ವರ

ಧಾರವಾಡದಲ್ಲಿ 2019ರ ಜ. 4, 5, 6ರಂದು ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉತ್ತರ ಕರ್ನಾಟಕದ ಸ್ಪೆಷಲ್ ರೊಟ್ಟಿ ಊಟದ ವ್ಯವಸ್ಥೆಗಾಗಿ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರ ಸ್ವಗ್ರಾಮ ಶಿಗ್ಲಿಯಲ್ಲಿ ಒಂದು ಲಕ್ಷ ರೊಟ್ಟಿ ಸಿದ್ಧವಾಗುತ್ತಿವೆ.

ಸಮ್ಮೇಳನದ ಊಟದ ಜವಾಬ್ದಾರಿಯನ್ನು ಜಿಲ್ಲಾಡಳಿತವು ಹುಬ್ಬಳ್ಳಿಯ ಅಗರವಾಲ್ ಕೆಟರಿಂಗ್​ನವರಿಗೆ ನೀಡಿದೆ. ಕೆಟರಿಂಗ್​ನವರು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಸಹೋದರ, ಗದಗ ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಸಲಹೆಯಂತೆ ನುಡಿ ಹಬ್ಬಕ್ಕೆ 1 ಲಕ್ಷ ರೊಟ್ಟಿಗಳನ್ನು ಸಿದ್ಧಪಡಿಸುವ ಕೆಲಸವನ್ನು ಶಿಗ್ಲಿ ಗ್ರಾಮದ ಬನಶಂಕರಿ ಮಹಿಳಾ ಸ್ವಸಹಾಯ ಗುಂಪಿನ ಮಧು ಈಶ್ವರ ಹುಲಗೂರ, ಕಮಲವ್ವ ವೀರಣ್ಣ ಪುಟ್ಟಪ್ಪನವರ, ಶೋಭಾ ಮಲ್ಲೇಶಪ್ಪ ಮೇಗಿಲಮನಿ ಅವರಿಗೆ ಕೊಟ್ಟಿದ್ದಾರೆ.

ಮಾಲದಂಡಿ ಜೋಳ: ಸ್ವಾವಲಂಬಿ ಬದುಕಿಗಾಗಿ ಮದುವೆ, ಸಭೆ-ಸಮಾರಂಭಗಳಿಗೆ ರೊಟ್ಟಿ ಮಾಡುವ ಈ ಮಹಿಳೆಯರು 15 ದಿನಗಳಿಂದ 8-10 ಸಹಾಯಕರೊಂದಿಗೆ ಲಕ್ಷ ರೊಟ್ಟಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಗುಣಮಟ್ಟದ ಮಾಲದಂಡಿ ಜೋಳ ತಂದು ಹಿಟ್ಟು ತಯಾರಿಸಿದ್ದಾರೆ. ಹಿಟ್ಟನ್ನು ಹದವಾಗಿ ನಾದಿ ಸೌರಯಂತ್ರ, ಗ್ಯಾಸ್ ಸ್ಟೋವ್ ಬಳಸಿ ರೊಟ್ಟಿ ಮಾಡುತ್ತಿದ್ದಾರೆ. ರೊಟ್ಟಿಗೆ ಎಳ್ಳು ಹಚ್ಚಿ ಚೆನ್ನಾಗಿ ಬೇಯಿಸಿ ಒಣಗಿಸಿದ್ದಾರೆ. ನಿತ್ಯ 3-4 ಸಾವಿರದಂತೆ 60 ಸಾವಿರ ರೊಟ್ಟಿಗಳನ್ನು ಸಿದ್ಧಪಡಿಸಿದ್ದಾರೆ. ಅವುಗಳಲ್ಲಿ ಒಂದಿಷ್ಟು ಸಜ್ಜೆ, ಮತ್ತೊಂದಿಷ್ಟು ಮಸಾಲೆ ರೊಟ್ಟಿಗಳೂ ಇವೆ.

ನೇಕಾರಿಕೆ ಬಿಟ್ಟು ರೊಟ್ಟಿ ತಟ್ಟುವ ಗಟ್ಟಿಗಿತ್ತಿಯರು: ಈ ಕುರಿತು ಮಾತನಾಡಿದ ಮಹಿಳಾ ಗುಂಪಿನ ಮಧು ಹುಲಗೂರ, ‘ನಮ್ಮದು ಮೂಲತಃ ನೇಕಾರಿಗೆ ವೃತ್ತಿ. ನೇಯ್ಗೆ ಕೆಲಸಕ್ಕೆ ನನ್ನೊಂದಿಗೆ ಮಹಿಳೆಯರಿಬ್ಬರು ಬರುತ್ತಿದ್ದರು. ಇತ್ತೀಚೆಗೆ ತಾಂತ್ರಿಕತೆ ಪರಿಣಾಮದಿಂದ ನೇಕಾರಿಕೆಯಲ್ಲಿ ಲಾಭವಾಗುತ್ತಿಲ್ಲ. ಬರಗಾಲದಿಂದ ಹೊಲದಲ್ಲೂ ಕೆಲಸವಿಲ್ಲ. ಹಾಗಾಗಿ ಉದ್ಯೋಗಕ್ಕಾಗಿ ಮೊಲ ಸಾಕಣೆ, ಹೊಲಿಗೆ ಕೆಲಸ ಮಾಡಿದೆವು. ಅದು ಸರಿ ಹೊಂದಲಿಲ್ಲ. ಈಗ ಎಲ್ಲರೂ ಸೇರಿ ರೊಟ್ಟಿ ತಯಾರಿಸುವ ಕೆಲಸ ಮಾಡುತ್ತಿದ್ದೇವೆ. ಖಾಸಗಿ ವಸತಿ ಶಾಲೆ-ಕಾಲೇಜ್, ಹೋಟೆಲ್, ಖಾನಾವಳಿ, ಮದುವೆ, ಸಭೆ-ಸಮಾರಂಭಗಳಿಗೆ ರೊಟ್ಟಿ ಮಾಡಿ ಕೊಡುತ್ತಿದ್ದೇವೆ’ ಎಂದು ತಿಳಿಸಿದರು. ‘ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳಿಗಾರ್ ಸರ್ ನಮಗೆ 1 ಲಕ್ಷ ರೊಟ್ಟಿ ಮಾಡಿಕೊಡುವಂತೆ ಹೇಳಿದ್ದಾರೆ. ಹಗಲು-ರಾತ್ರಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ. ಸಮ್ಮೇಳನಕ್ಕೆ ಬಂದ ಜನ ನಮ್ಮ ರೊಟ್ಟಿ ತಿಂದು ರುಚಿಯಾಗಿದೆ ಎಂದರೆ ನಮಗಷ್ಟೇ ಖುಷಿ. ಕನ್ನಡ ಜಾತ್ರೆಯಲ್ಲಿ ದೊಡ್ಡ ಕೆಲಸದೊಂದಿಗೆ ನಾಲ್ಕು ಕಾಸು ಸಂಪಾದನೆಗೆ ಅವಕಾಶ ಸಿಕ್ಕಿದ್ದು ಸಂತಸವಾಗಿದೆ’ ಎನ್ನುತ್ತಾರೆ ಈ ಗಟ್ಟಿಗಿತ್ತಿಯರು.