ಕೂಡಲಸಂಗಮ: ಅಕ್ಷರ ಕಲಿಕೆಯೊಂದಿಗೆ ಜೀವನ ಕೌಶಲ ಪಡೆಯುವುದೇ ಸಾಕ್ಷರತೆ. ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ಸಾಕ್ಷರಾಗಬೇಕು ಎಂದು ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ್ ಕಿಲ್ಲೆದಾರ ಹೇಳಿದರು.
ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ತಾಲೂಕುಮಟ್ಟದ ವಿಶ್ವ ಸಾಕ್ಷರತಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿರು.
ವಯಸ್ಸು, ಲಿಂಗ ಲೆಕ್ಕಿಸದೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಮೂಲಕ ಸಾಕ್ಷರರನ್ನಾಗಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಶಾಲೆಗೆ ಬರುವ ಪ್ರತಿ ಮಗುವೂ ತಮ್ಮ ಮನೆಯಲ್ಲಿ ಅಕ್ಷರ ಜ್ಞಾನ ಇರದೇ ಇರುವವರಿಗೆ ಅಕ್ಷರ ಜ್ಞಾನದ ಬಗ್ಗೆ ತಿಳಿಸುವ ಕಾರ್ಯ ಮಾಡಬೇಕು. ವಿವಿಧ ಕೌಶಲಗಳ ಮೂಲಕ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವ ಕಾರ್ಯವನ್ನು ನಾವೆಲ್ಲರೂ ಮಾಡೋಣ ಎಂದರು.
ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯ ನೋಡಲ್ ಅಧಿಕಾರಿ ವಿನೋದ ಭೋವಿ ಮಾತನಾಡಿ, ಕಲಿಕೆ ಪ್ರತಿ ಮಾನವನ ಮೂಲಭೂತ ಹಕ್ಕು. ಸಾಕ್ಷರತೆ ವೈಯಕ್ತಿಕ ಸಬಲೀಕರಣಕ್ಕೆ ಅಡಿಪಾಯ ಹಾಕುತ್ತದೆ. ಮಕ್ಕಳಿಂದ ಹಿಡಿದು ಎಲ್ಲರ ಬಾಳಲ್ಲಿ ಬೆಳಕು ತರುತ್ತದೆ. ಸ್ವಾವಲಂಬಿಯಾಗಿ ಬದುಕಲು ಸಾಕ್ಷರತೆ ಅಗತ್ಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕುರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ಮುಖ್ಯಶಿಕ್ಷಕಿ ಎಸ್.ಬಿ. ಈಟಿ, ಆರ್. ಎಂ. ಬಾಗವಾನ, ಎಸ್‌ಡಿಎಂಸಿ ಸದಸ್ಯರಾದ ಪ್ರಭು ಹಿರೇಮಠ, ಬಸಯ್ಯ ರೇವಡಿಹಾಳ, ಶಿಕ್ಷಕ ಮಹಾದೇವ ಬಸರಕೋಡ, ಎಚ್.ಡಿ. ಬಡಿಗೇರ, ಪಿ.ವಿ. ಕುಲಕರ್ಣಿ ಇತರರಿದ್ದರು.
ಕಾವೇರಿ ಕಾಶಿಬಾಯಿ ಸಂಗಡಿಗರು ಪ್ರಾರ್ಥಿಸಿದರು. ಡಿ.ಬಿ. ನದಾಫ್ ಸ್ವಾಗತಿಸಿದರು. ಸಿದ್ದನಗೌಡ ಪಾಟೀಲ ನಿರೂಪಿಸಿ, ವಂದಿಸಿದರು.
ಇದಕ್ಕೂ ಮುನ್ನ ಸಾಕ್ಷರತಾ ಧ್ವಜಾರೋಹಣ ನಡೆಯಿತು. ವಿದ್ಯಾರ್ಥಿಗಳಿಗೆ ಸಾಕ್ಷರತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.