ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಪ್ರಕ್ರಿಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಚೀನಾ

ಬೀಜಿಂಗ್​: ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಸ್ತಾವನೆ ಕುರಿತು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಶೀಘ್ರ ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು. ಆದರೆ, ಅದಕ್ಕೆ ಸಮಯವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಚೀನಾ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್​ ದಾಳಿ ನಡೆದ ನಂತರ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಗೆ ತಾಂತ್ರಿಕ ಕಾರಣಗಳನ್ನು ನೀಡಿ ಚೀನಾ ತನ್ನ ವಿಟೋ ಅಧಿಕಾರ ಬಳಸಿಕೊಂಡು ತಡೆಯೊಡ್ಡಿತ್ತು.

ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಅವರನ್ನು ಭೇಟಿ ಮಾಡಿದ ಕೆಲವೇ ದಿನಗಳ ನಂತರ ಚೀನಾ ಈ ಮಹತ್ವದ ಪ್ರತಿಕ್ರಿಯೆ ನೀಡಿದೆ. ‘ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು, ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ’ ಎಂದು ಈ ಕುರಿತು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜಿಂಗ್​ ಶ್ವಾಂಗ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಹೊಸ ಪ್ರಸ್ತಾವನೆ ಸಲ್ಲಿಸಿವೆ. ಇದರಿಂದ ಚೀನಾದ ಮೇಲೆ ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದ್ದು, ಶೀಘ್ರದಲ್ಲೇ ಈ ಪ್ರಕರಣವನ್ನು ಸುಸೂತ್ರವಾಗಿ ಇತ್ಯರ್ಥಗೊಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.

ಜತೆಗೆ ಕೆಲವು ದಿನಗಳ ಹಿಂದೆ ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಜಯ್​ ಗೋಖಲೆ ಅವರು ಚೀನಾಗೆ ಭೇಟಿ ನೀಡಿ ಚೀನಾ ವಿದೇಶಾಂಗ ಸಚಿವ ವಾಂಗ್​ ಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಪುಲ್ವಾಮಾ ದಾಳಿಯಲ್ಲಿ ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆ ಮತ್ತು ಮಸೂದ್​ ಅಜರ್​ ಪಾತ್ರ ಇರುವ ಕುರಿತು ಸಾಕ್ಷ್ಯಾಧಾರಗಳನ್ನು ನೀಡಿದ್ದರು. (ಏಜೆನ್ಸೀಸ್​)