ಮದ್ಯ ಅಕ್ರಮ ಸಾಗಾಟ ವ್ಯಾಪಕ

<ಗಡಿಪ್ರದೇಶದಲ್ಲಿ ಚುರುಕುಗೊಂಡ ಕಾರ್ಯಾಚರಣೆ>

ಕಾಸರಗೋಡು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ಕಾಸರಗೋಡಿಗೆ ಮದ್ಯ ಅಕ್ರಮ ಸಾಗಾಟ ವ್ಯಾಪಕವಾಗಿ ನಡೆಯುತ್ತಿದೆ. ಅಬಕಾರಿ ಇಲಾಖೆ ಸ್ಪೆಷಲ್ ಸ್ಕ್ವಾಡ್ ಹಾಗೂ ಪೊಲೀಸರ ಬಿಗು ಕಾರ್ಯಾಚರಣೆ ಮಧ್ಯೆಯೂ ಕರ್ನಾಟಕ ನಿರ್ಮಿತ ಮದ್ಯ ಜಿಲ್ಲೆಗೆ ಬಂದು ಸೇರುತ್ತಿವೆ.

ಮಲೆನಾಡು ಪ್ರದೇಶದಲ್ಲಿ ಅಬಕಾರಿ ಹಾಗೂ ಪೊಲೀಸರ ಕಣ್ತಪ್ಪಿಸಿ, ವ್ಯಾಪಕವಾಗಿ ನಕಲಿ ಸಾರಾಯಿ ತಯಾರಿಸಲಾಗುತ್ತಿದೆ. ಜತೆಗೆ ಗೇರುಹಣ್ಣಿನಿಂದ ತಯಾರಿಸುವ ಸಾರಾಯಿ ನಾಡಿನಲ್ಲಿ ವ್ಯಾಪಕಗೊಂಡಿದ್ದು, ಭರ್ಜರಿ ಮಾರಾಟವೂ ನಡೆಯುತ್ತಿದೆ. ತಲಪ್ಪಾಡಿ, ಬಾಯಾರು-ಮುಳಿಗದ್ದೆ, ಅಡ್ಕಸ್ಥಳ, ಒಡ್ಯ, ಪಾಣಾಜೆ, ಕಿನ್ನಿಂಗಾರು, ಗಾಳಿಮುಖ ಸಹಿತ ಗಡಿ ಪ್ರದೇಶದ ಮೂಲಕ ಕರ್ನಾಟಕದಿಂದ ವ್ಯಾಪಕವಾಗಿ ಸಾರಾಯಿ ಸಾಗಿಸಲಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಏ.21ರಂದು ಸಾಯಂಕಾಲ 6ರಿಂದ 23ರಂದು ಸಂಜೆ 6ರವರೆಗೆ ರಾಜ್ಯಾದ್ಯಂತ ಮದ್ಯದಂಗಡಿ ಮುಚ್ಚಲಾಗುತ್ತಿದ್ದು, ಈ ಸಂದರ್ಭ ಅನಧಿಕೃತ ಮದ್ಯ ಮಾರಾಟ ಬಿರುಸುಗೊಳ್ಳುವ ಸಾಧ್ಯತೆಯಿದೆ.

ವ್ಯಾಪಕ ದಾಳಿ: ಮಂಜೇಶ್ವರ ಅಬಕಾರಿ ಮತ್ತು ಪೊಲೀಸ್ ತಪಾಸಣಾ ಕೇಂದ್ರದಲ್ಲಿ ಮದ್ಯಸಾಗಾಟ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್‌ಲ್ಲಿ ಸಾಗಿಸುತ್ತಿದ್ದ ನಾಲ್ಕು ಲೀ. ವಿದೇಶಿ ಮದ್ಯವನ್ನು ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಹೊಸ ಬಸ್‌ನಿಲ್ದಾಣ ವಠಾರದಲ್ಲಿ ಪೊಲೀಸರು ಇತ್ತೀಚೆಗೆ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 98 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಮಧೂರು ಸನಿಹದ ಕೊಲ್ಲಂಗಾನದಲ್ಲಿ 20 ಲೀ. ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಬಂದಡ್ಕದ ಮನೆಯೊಂದಕ್ಕೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ 16 ಲೀ. ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದ್ದಾರೆ.