ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಚಳವಳಿ ನಡೆಯಲಿ

ಕಳಸ: ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಹೋರಾಟ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಮಮ್ತಾಜ್ ಬೇಗಂ ಹೇಳಿದರು.

ರೋಟರಿ ಭವನದಲ್ಲಿ ಆಲ್ಕೋಹಾಲಿಕ್ಸ್ ಅನಾನಿಮಸ್ ಕಳಸ ಘಟಕದ 14ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸಮಾಜದ ಅಶಾಂತಿಗೆ ಮದ್ಯದ ಅಂಗಡಿಗಳು ಕಾರಣ. ಬೇರೆ ರಾಜ್ಯಗಳಂತೆ ಕರ್ನಾಟದಲ್ಲೂ ಮದ್ಯಪಾನ ನಿಷೇಧಿಸಬೇಕು ಎಂದು ಹೇಳಿದರು.

ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಸ್ಥೆಯಿಂದ ನೂರಾರು ಮದ್ಯಪಾನಿಗಳು ವ್ಯಸನಮುಕ್ತರಾಗಿ ಇಂದು ನೆಮ್ಮದಿಯ ಸಂಸಾರ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಹುಟ್ಟಿದ ಈ ಸಂಸ್ಥೆ ನೂರಾರು ಜನರಿಗೆ ಸಮಾಜದಲ್ಲಿ ಗೌರಯುತವಾಗಿ ಬದುಕಲು ಜೀವನ ಕಲ್ಪಿಸಿದೆ ಎಂದು ಹೇಳಿದರು.

ರೋಟರಿ ಅಧ್ಯಕ್ಷ ಕಿರಣ್ ಶೆಟ್ಟಿ ಮಾತನಾಡಿ, ಮದ್ಯವ್ಯಸನಿ ತನ್ನೊಳಗೆ ಪ್ರಾಮಾಣಿಕತೆ ಪ್ರದರ್ಶಿಸಿದರೆ ಮದ್ಯಪಾನದಿಂದ ದೂರವಾಗ ಬಹುದು. ಮದ್ಯಪಾನ ಒಂದು ರೋಗ ಎಂದುಕೊಂಡಾಗ ಮಾತ್ರ ಅದರಿಂದ ದೂರವಾಗಬಹುದು. ವಾರಪೂರ್ತಿ ದುಡಿದ ಹಣವನ್ನು ವಾರದ ಕೊನೆಯಲ್ಲಿ ಮದ್ಯದಂಗಡಿಗೆ ಹಾಕಿ ತಮ್ಮ ಸಂಸಾರ ಹಾಳುಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಮನುಷ್ಯ ಒಮ್ಮೆ ಮದ್ಯವ್ಯಸನಕ್ಕೆ ದಾಸನಾದರೆ ಅದರಿಂದ ಹೊರಬರಲು ಕಷ್ಟ. ಮದ್ಯಪಾನದಿಂದ ಸಮಾಜಘಾತಕ ಕೆಲಸಗಳು ನಡೆಯುತ್ತಿವೆ. ಮದ್ಯಪಾನ ಮಾಡಿದ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆಂಬ ಅರಿವು ಇರುವುದಿಲ್ಲ ಎಂದರು.

ಮದ್ಯ ವ್ಯಸನದಿಂದ ಮುಕ್ತರಾದ ಹಲವರು ತಮ್ಮ ಅನುಭವ ಹಂಚಿಕೊಂಡರು. ಐದು ಮಂದಿ ಮದ್ಯವ್ಯಸನದಿಂದ ಮುಕ್ತವಾದ ವರ್ಷವನ್ನು ತಮ್ಮ ಜನ್ಮದಿನಾಚರಣೆಯನ್ನಾಗಿ ಕುಟುಂಬದವರೊಂದಿಗೆ ಆಚರಿಸಿಕೊಂಡರು. ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಸ್ಥೆ ಅಧ್ಯಕ್ಷ ಮೋಹನ್, ಸಿರಿಲ್ ಕಾರ್ಕಳ ಇದ್ದರು.

Leave a Reply

Your email address will not be published. Required fields are marked *