ಚೆನ್ನೈ: ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೆರೇಷನ್ ಲಿ. ಸೇರಿ ಡಿಸ್ಟಿಲರಿ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ ಬಳಿಕ ತಮಿಳುನಾಡಿನಲ್ಲಿ 1000 ಕೋಟಿ ರೂ. ಮದ್ಯ ಹಗರಣ ಬೆಳಕಿಗೆ ಬಂದಿದೆ. ಈ ಹಗರಣ ಬಿಜೆಪಿ ಮತ್ತು ಡಿಎಂಕೆ ನಡುವೆ ನಡೆಯುತ್ತಿರುವ ಜಟಾಪಟಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಜಾರಿ ನಿರ್ದೇಶನಾಲಯ (ಇಡಿ) ಮಾರ್ಚ್ 6 ರಿಂದ ನಾಲ್ಕು ದಿನ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೆರೇಷನ್ ಲಿ. ನ ಮುಖ್ಯ ಕಚೇರಿ, ಡಿಪೋಗಳು, ಡಿಸ್ಟಿಲರಿಗಳು ಮತ್ತು ಎನ್ಎನ್ಜೆ, ಕೆಎಎಲ್ಎಸ್, ಅಕಾರ್ಡ್, ಎಸ್ಎಐಎಫ್ಎಲ್, ಶಿವಾ ಡಿಸ್ಟಿಲರಿ ಮತ್ತು ಇಬ್ಬರು ವ್ಯಕ್ತಿಗಳ ಕಾರ್ಪೆರೇಟ್ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿತ್ತು. ಈ ದಾಳಿ ವೇಳೆ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೆರೇಷನ್ ಲಿ. ಗೆ ಮದ್ಯ ಸರಬರಾಜು ಮಾಡುವ ಡಿಸ್ಟಿಲರಿಗಳು, ಬಾಟಲ್ ತಯಾರಿಕಾ ಕಂಪನಿಗಳೊಂದಿಗೆ ಸೇರಿ ಹೆಚ್ಚುವರಿ ವೆಚ್ಚ ಮತ್ತು ನಕಲಿ ಖರೀದಿಗಳ ಮೂಲಕ 1000 ಕೋಟಿ ರೂ. ವಂಚಿಸಿದ್ದಾರೆ. ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೆರೇಷನ್ ಲಿ. ಟೆಂಡರ್ ನೀಡುವಾಗಲೂ ನಿಯಮಗಳನ್ನು ಪಾಲಿಸಿಲ್ಲ, ಜಿಎಸ್ಟಿ, ಪ್ಯಾನ್ ನಂಬರ್ ಇಲ್ಲದವರಿಗೂ ಸಹ ಬಾರ್ ಲೈಸನ್ಸ್ ವಿತರಿಸಲಾಗಿದೆ ಎಂದು ಇಡಿ ತಿಳಿಸಿತ್ತು.
ಮದ್ಯ ಹಗರಣದ ಕುರಿತು ಬಿಜೆಪಿ ನಾಯಕ ಅಮಿತ್ ಮಾಳವೀಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು ‘ಇ.ಡಿ ದಾಳಿ ವೇಳೆ 1000 ಕೋಟಿ ರೂ.ನ ಲೆಕ್ಕವಿಲ್ಲದ ಹಣ ವರ್ಗಾವಣೆಯ ದಾಖಲೆಗಳು ಪತ್ತೆಯಾಗಿದೆ. ಡಿಸ್ಟಿಲರಿಗಳ ಮೂಲಕ ಲಂಚದ ರೂಪದಲ್ಲಿ ಹಣ ಸಂದಾಯವಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ಹಣವನ್ನು ಪಡೆದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಶಾಸಕಿ ವಾಸಂತಿ ಶ್ರೀನಿವಾಸನ್ ಅವರು ವಿಧಾನಸಭೆ ಸ್ಪೀಕರ್ಗೆ ಪತ್ರ ಬರೆದಿದ್ದು, ಇಡಿ ಹೊರಗೆಳೆದಿರುವ ಮದ್ಯ ಹಗರಣದ ಕುರಿತು ರಾಜ್ಯ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಬಿಜೆಪಿ ಆರೋಪವನ್ನು ಅಬಕಾರಿ ಸಚಿವ ಸೆಂಥೀಲ್ ಬಾಲಾಜಿ ತಳ್ಳಿಹಾಕಿದ್ದಾರೆ.
ವಿಧಾನಸಭೆಯಲ್ಲಿ ಭಾಷಾ ಕಿಡಿ ವಿವಾದ: ಹಿಂದಿ ಹೇರಿಕೆ ವಿಚಾರದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳ ನಡುವೆ ನಡೆಯುತ್ತಿರುವ ಭಾಷಾ ಸಂಘರ್ಷದ ಕಿಡಿ ಶುಕ್ರವಾರ ತಮಿಳುನಾಡು ಸದನದಲ್ಲೂ ಗದ್ದಲಕ್ಕೆ ಕಾರಣವಾಯಿತು.
ತಮಿಳುನಾಡು ಹಣಕಾಸು ಸಚಿವ ಡಾ.ಪಳನಿವೇಲ್ ತ್ಯಾಗರಾಜನ್ ಬಜೆಟ್ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಸಮಗ್ರ ಶಿಕ್ಷಣ ಯೋಜನೆಯ 2,150 ಕೋಟಿ ರೂ. ನಿಧಿ ನೀಡದೆ ಕೇಂದ್ರ ಸರ್ಕಾರ ತಮಿಳುನಾಡಿಗೆ ವಂಚಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರಕ್ಕೆ ರಾಜ್ಯ ವಿರೋಧ ಹಿಂಪಡೆಯುವವರೆಗೆ ಈ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ದ್ವಿಭಾಷಾ ನೀತಿ ನಮ್ಮನ್ನು ಉನ್ನತ ಎತ್ತರಕ್ಕೆ ಕೊಂಡೊಯ್ದಿದೆ. ಈ ಮೂಲಕ ತಮಿಳಿಗರು ಜಾಗತಿಕವಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಬಜೆಟ್ನಲ್ಲಿ ಎಂದಿನ ಅಧಿಕೃತ ರೂಪಾಯಿ ಚಿಹ್ನೆ ಬದಲು ತಮಿಳಿನ ‘ರು’ ಅಕ್ಷರ ಬಳಸುವ ಮೂಲಕ ತಮಿಳುನಾಡು ಸರ್ಕಾರ ಗುರುವಾರ ವಿವಾದಕ್ಕೀಡಾಗಿತ್ತು.
ಬಿಜೆಪಿ ಶಾಸಕರ ಸಭಾತ್ಯಾಗ: ತಮಿಳುನಾಡು ವಿಧಾನಸಭೆಯಲ್ಲಿ ಬಜೆಟ್ ಭಾಷಣದ ವೇಳೆ ನಾಲ್ವರು ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ಎಐಎಡಿಎಂಕೆ ಪಕ್ಷದ 60ಕ್ಕೂ ಅಧಿಕ ಶಾಸಕರು ಸಭಾತ್ಯಾಗ ಮಾಡಿದ ಬೆನ್ನಿಗೇ ಬಿಜೆಪಿಗರೂ ಸದನದಿಂದ ಹೊರನಡೆದರು. ರೂಪಾಯಿ ಚಿಹ್ನೆ ಬದಲಾವಣೆ, ರಾಜ್ಯ ಮದ್ಯ ಮಾರಾಟ ಏಜೆನ್ಸಿ ಟಾಸ್ವ್ಯಾಕ್ನಲ್ಲಿನ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆಯಿತು. ‘ಇಡೀ ಬಜೆಟ್ ಕಣ್ಣೊರೆಸುವ ತಂತ್ರ, ಇದರಲ್ಲಿ ಪ್ರಯೋಜನಕಾರಿ ಆಗಿರುವುದೇನೂ ಇಲ್ಲ’ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ಸರ್ಕಾರಕ್ಕೆ ಬಿಟ್ಟಿದ್ದು, ನಾನೇನೂ ಹೇಳಲ್ಲ…: ತಮಿಳುನಾಡು ಸರ್ಕಾರ ರೂಪಾಯಿ ಚಿಹ್ನೆ ಬದಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ವಿನ್ಯಾಸಕ ಪ್ರೊ.ಡಿ.ಉದಯಕುಮಾರ್, ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬದಲಾವಣೆಯ ಅಗತ್ಯವಿದೆ ಎಂದು ಸರ್ಕಾರ ಇದ್ದಕ್ಕಿದ್ದಂತೆ ನಿರ್ಧರಿಸಿದ್ದು, ಅವರು ಪ್ರತ್ಯೇಕ ಚಿಹ್ನೆ ಬಳಸಲು ಬಯಸಿದ್ದಾರೆ. ಅದು ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ, ಆ ಬಗ್ಗೆ ನನಗೆ ಹೇಳಲು ಏನೂ ಇಲ್ಲ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ನನ್ನ ತಂದೆ ನಾನು ಹುಟ್ಟುವುದಕ್ಕೂ ಮೊದಲೇ ಶಾಸಕರು. ಈಗ ಅವರಿಗೆ ವಯಸ್ಸಾಗಿದ್ದು, ಹಳ್ಳಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಪ್ರಕರಣ ಕಾಕತಾಳೀಯ ಎಂದೂ ಅವರು ಹೇಳಿದ್ದಾರೆ. ಬಜೆಟ್ ಮುನ್ನ ದಿನವಾದ ಗುರುವಾರ ತಮಿಳುನಾಡು ಸರ್ಕಾರ ಹೊರಡಿಸಿದ್ದ ಪ್ರಚಾರಾರ್ಥ ಪೋಸ್ಟರ್ನಲ್ಲಿ ಅಧಿಕೃತ ರೂಪಾಯಿ ಚಿಹ್ನೆ ಬದಲು ತಮಿಳು ‘ರು’ ಅಕ್ಷರ ಬಳಸಿದ್ದು, ಗಮನ ಸೆಳೆದು ಭಾರಿ ವಿವಾದಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ವಿನ್ಯಾಸಕರು ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ. ತಂಜಾವೂರು ಮೂಲದ ಉದಯಕುಮಾರ್ ಐಐಟಿ ಮುಂಬೈನ ಸ್ನಾತಕೋತ್ತರ ಪದವೀಧರರು. ಅವರು ರೂಪಾಯಿ ಚಿಹ್ನೆಗಾಗಿ ವಿನ್ಯಾಸ ರೂಪಿಸುವ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಐಐಟಿ ಗುವಾಹಟಿಯ ವಿನ್ಯಾಸ ಇಲಾಖೆಯಲ್ಲಿ ಅವರು ಹೊಸ ಉದ್ಯೋಗ ಆರಂಭಿಸುವ ಒಂದು ದಿನದ ಮೊದಲು ಅವರು ಈ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದು, ಅವರ ವಿನ್ಯಾಸದ ಚಿಹ್ನೆ ರೂಪಾಯಿ ಚಿಹ್ನೆಯಾಗಿ ಆಯ್ಕೆ ಆಗಿತ್ತು.
WTC ಫೈನಲ್‌ನಲ್ಲಿ ಭಾರತದ ಅನುಪಸ್ಥಿತಿ; ದೊಡ್ಡ ಮೊತ್ತದ ನಷ್ಟದ ಸುಳಿಗೆ ಸಿಲುಕಿದ ಆಯೋಜಕರು
6 ತಿಂಗಳ ಮಗುವಿನೊಂದಿಗೆ ವಿಮಾನ ಪ್ರಯಾಣ; ಸಹಪ್ರಯಾಣಿಕರಿಗೆ ದಂಪತಿ ಕೊಟ್ಟ ಪತ್ರ ವೈರಲ್