ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಟಿಪ್ಪು ಉದ್ಯಾನದಲ್ಲಿ ಪ್ರತಿಭಟನೆ

ರಾಯಚೂರು: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮದ್ಯ ನಿಷೇಧ ಆಂದೋಲನದ ನೇತೃತ್ವದಲ್ಲಿ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿದರು.

ಮದ್ಯದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗುತ್ತಿರುವುದು ಸರ್ಕಾರ, ಜನಪ್ರತಿನಿಧಿಗಳ ಗಮನಕ್ಕಿದ್ದರೂ ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಬರುವ ಆದಾಯವನ್ನು ಮುಂದಿಟ್ಟುಕೊಂಡು ಮದ್ಯ ನಿಷೇಧಕ್ಕೆ ಇದುವರೆಗೂ ಮುಂದಾಗಿಲ್ಲ.

ನಾಲ್ಕು ವರ್ಷಗಳಿಂದ ಮದ್ಯ ನಿಷೇಧ ಆಂದೋಲನದಿಂದ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸುತ್ತಾ ಬರಲಾಗಿದ್ದು, ಜನಪ್ರತಿನಿಧಿಗಳು ಹೋರಾಟವನ್ನು ನಿರ್ಲಕ್ಷಿಸುತ್ತಾ ಬರುತ್ತಿದ್ದಾರೆ. ಗಾಂಧೀಜಿಯವರ 150ನೇ ಜನ್ಮದಿನ ಆಚರಣೆ ಅಂಗವಾಗಿ ಮದ್ಯ ನಿಷೇಧದ ಕನಸನ್ನು ನನಸು ಮಾಡುವ ಸಮಯ ಬಂದಿದೆ.

ಜಿಲ್ಲಾ ಕೇಂದ್ರಗಳ್ಲಲಿ ಹೋರಾಟ ನಡೆಸುವ ಮೂಲಕ ಮುಖ್ಯಮಂತ್ರಿಗಳಿಗೆ ಮದ್ಯ ಮುಕ್ತ ಕರ್ನಾಟಕದ ಹಕ್ಕೊತ್ತಾಯವನ್ನು ಮಾಡುತ್ತಿದ್ದು, ಶಾಸಕರು ಮುಂಬರುವ ಅಧಿವೇಶನದಲ್ಲಿ ಮದ್ಯ ನಿಷೇಧಕ್ಕೆ ಸಂಬಂಧಪಟ್ಟ ಪ್ರಸ್ತಾವನೆಯನ್ನು ಮಂಡಿಸಬೇಕು ಎಂದು ಒತ್ತಾಯಿಸಿದರು.

ಆಂದೋಲನದ ಸಂಚಾಲಕಿ ವಿದ್ಯಾ ಪಾಟೀಲ್, ಪದಾಧಿಕಾರಿಗಳಾದ ದುರ್ಗಶ್ರೀ, ಸ್ವರ್ಣ ಭಟ್, ರಾಘವೇಂದ್ರ, ಗುರುರಾಜ, ವೆಂಕಟೇಶ ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಮಹಿಳೆಯರು ಭಾಗವಹಿಸಲಿದ್ದರು.

Leave a Reply

Your email address will not be published. Required fields are marked *