ಪ್ಯಾರಿಸ್: ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ತಾರೆ ಲಯೋನಲ್ ಮೆಸ್ಸಿ ದಾಖಲೆಯ ಆರನೇ ಬಾರಿಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ಪ್ಯಾರಿಸ್ನಲ್ಲಿ ಮಂಗಳವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ದೀರ್ಘಕಾಲದ ಗೆಳತಿ ಹಾಗೂ ಮಕ್ಕಳೊಂದಿಗೆ ಬಂದ ಮೆಸ್ಸಿ ಪ್ರಶಸ್ತಿ ಎತ್ತಿಹಿಡಿದರು. ಈ ಮೂಲಕ 3 ವರ್ಷಗಳಿಂದ ಎದುರಿಸುತ್ತಿದ್ದ ಬ್ಯಾಲನ್ ಡಿಓರ್ ಪ್ರಶಸ್ತಿಯ ಬರ ನೀಗಿಸಿಕೊಂಡರು.
ಜ್ಯುವೆಂಟಿಸ್ನ ಕ್ರಿಶ್ಚಿಯಾನೋ ರೊನಾಲ್ಡೋ, ಲಿವರ್ಪೂಲ್ ಸ್ಟಾರ್ ಆಟಗಾರ ವರ್ಜಿಲ್ ವ್ಯಾನ್ ಡಿಜ್ಕ್ ಮತ್ತು ಸ್ಯಾಡಿಯೋ ಮಾನೆ ಮೆಸ್ಸಿಗೆ ತೀವ್ರ ಸ್ಪರ್ಧೆ ಒಡ್ಡಿದ್ದರು.
ಜಾಗತಿಕ ಫುಟ್ಬಾಲ್ನ ಎರಡು ಧೃವತಾರೆಗಳಾಗಿರುವ ಮೆಸ್ಸಿ ಮತ್ತು ರೊನಾಲ್ಡೋ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕಳೆದ 10 ವರ್ಷಗಳಿಂದ ತಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು.
ಕ್ರೊವೇಷಿಯಾ ಲೂಕಾ ಮ್ಯಾಡ್ರಿಕ್ 2018ರಲ್ಲಿ ಇಬ್ಬರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿದ್ದರು.
ಕಳೆದ 12 ತಿಂಗಳಲ್ಲಿ ಮೆಸ್ಸಿ 36 ಗೋಲ್ ಗಳಿಸಿದ್ದಾರೆ. ಬಾರ್ಸಿಲೋನಾ 10ನೇ ಸ್ಪ್ಯಾನಿಷ್ ಲೀಗ್ ಜಯದ ರೂವಾರಿಯಾಗಿದ್ದರು. ಅಲ್ಲದೇ ಚಾಂಪಿಯನ್ಸ್ ಲೀಗ್ನಲ್ಲಿ ಅತ್ಯಧಿಕ ಸ್ಕೋರರ್ ಎನಿಸಿಕೊಂಡಿದ್ದಾರೆ.
ಬ್ಯಾಲನ್ ಡಿ’ಓರ್ ಫಿಫಾದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ವರ್ಷದಲ್ಲಿ ಅತ್ಯಧಿಕ ಗೋಲ್ ಗಳಿಸಿದ ಆಟಗಾರರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.-(ಏಜೆನ್ಸೀಸ್)