ಜಕಾರ್ತದಿಂದ ಟೇಕ್​ ಆಫ್​ ಆದ ಕೆಲವೇ ನಿಮಿಷಗಳಲ್ಲಿ ಲಯನ್​ ವಿಮಾನ ನಾಪತ್ತೆ: ಸಮುದ್ರದಲ್ಲಿ ಪತನ

ಜಕಾರ್ತ: ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ ಬ್ಯಾಂಗ್ಕಾ ದ್ವೀಪದ ಪ್ರಮುಖ ನಗರ ಪಂಗ್ಕಲ್ ಪಿನಾಂಗ್ ಕಡೆ ಹೊರಟ್ಟಿದ್ದ ಲಯನ್​ ವಿಮಾನ ಟೇಕ್​ ಆಫ್​ ಆದ ಕೆಲವೇ ನಿಮಿಷಗಳಲ್ಲಿ ನಾಪತ್ತೆಯಾಗಿದ್ದು, ಸಮುದ್ರದಲ್ಲಿ ಪತನವಾಗಿದೆ ಎಂದು ಇಂಡೋನೇಷ್ಯಾದ ವಿಮಾನ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಇಂಡೋನೇಷ್ಯಾದ ರಕ್ಷಣಾ ಮತ್ತು ಶೋಧ ಸಂಸ್ಥೆಯ ವಕ್ತಾರ ಯೂಸುಫ್​ ಲತಿಫ್​ ವಿಮಾನ ಪತನವಾಗಿರುವ ಮಾಹಿತಿಯನ್ನು ಖಚಿತ ಪಡಿಸಿದ್ದು, ವಿಮಾನದಲ್ಲಿ 189 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯಿದೆ.

ಟೇಕ್​ ಆಫ್​ ಆದ 13 ನಿಮಿಷದಲ್ಲಿ ವಿಮಾನ ನಾಪತ್ತೆಯಾಗಿದ್ದು, ವಿಮಾನ ಬೀಳುತ್ತಿರುವ ದೃಶ್ಯವನ್ನು ಜಕಾರ್ತ ಬಂದರಿನಿಂದ ಹೊರಟಿದ್ದ ಬೋಟ್​ ಸಿಬ್ಬಂದಿ ನೋಡಿದ್ದಾರೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಬೋಯಿಂಗ್​ 737 ಮ್ಯಾಕ್ಸ್​ 8 ಲಯನ್​ ವಿಮಾನವು ಫ್ಲೈಟ್ ರೇಡಾರ್ 24 ಏರ್​ ಟ್ರ್ಯಾಕಿಂಗ್​ ಸೇವೆ ಅಡಿ ಕಾರ್ಯನಿರ್ವಹಿಸುತ್ತಿತ್ತು. ವಿಮಾನವು ಬೆಳಗ್ಗೆ 6.20ರ ಸಮಯದಲ್ಲಿ ಟೇಕ್​ ಆಫ್ ಆಗಿತ್ತು. 7.20ರ ಸಮಯಕ್ಕೆ ಪಂಗ್ಕಲ್ ಪಿನಾಂಗ್ ತಲುಪಬೇಕಿತ್ತು.

ನಾವು ಮಾಹಿತಿಯನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದು, ಈ ಕ್ಷಣದಲ್ಲಿ ನಾವು ಯಾವುದೇ ಕಮೆಂಟ್​ ಮಾಡುವುದಿಲ್ಲ. ಇಂದು ಸಂಜೆ ವೇಳೆಗೆ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗುತ್ತದೆ ಎಂದು ಲಯನ್​ ವಿಮಾನ ಸಂಸ್ಥೆಯ ಮುಖ್ಯಕಾರ್ಯ ನಿರ್ವಾಹಕ ಎಡ್ವರ್ಡ್ ಸಿರೈಟ್​ ಹೇಳಿದ್ದಾರೆ. (ಏಜೆನ್ಸೀಸ್​)