ಭಾಷಾ ವೈವಿಧ್ಯತೆ ಮೆರೆದ 17ನೇ ಲೋಕಸಭೆ: ಸದಾನಂದ ಗೌಡ, ಪ್ರಲ್ಹಾದ ಜೋಷಿ ಕನ್ನಡದಲ್ಲಿ ಪ್ರಮಾಣ

ನವದೆಹಲಿ: ಇಂದಿನಿಂದ ಆರಂಭವಾದ 17ನೇ ಲೋಕಸಭೆ ಅಧಿವೇಶನದಲ್ಲಿ ಭಾಷಾ ವೈವಿಧ್ಯತೆ ಪ್ರದರ್ಶನಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಮೊದಲ್ಗೊಂಡು ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಸದಸ್ಯರು ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಹಂಗಾಮಿ ಸಭಾಧ್ಯಕ್ಷ ವೀರೇಂದ್ರ ಕುಮಾರ್​ ಪ್ರಮಾಣವಚನ ಬೋಧಿಸುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ ಮತ್ತು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕಿವಿ, ಗಂಟಲು ಮತ್ತು ಮೂಗು ವೈದ್ಯರಾದ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಮತ್ತು ಗೃಹ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್​ ಚೌಬೆ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಅಚ್ಚರಿ ಮೂಡಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೇರಳದ ಕಾಂಗ್ರೆಸ್​ ಸದಸ್ಯ ಕೋಡಿಕುನ್ನಿಲ್​ ಸುರೇಶ್​ ಇಂಗ್ಲಿಷ್​ ಅಥವಾ ಮಾತೃಭಾಷೆ ಮಲೆಯಾಳದಲ್ಲಿ ಪ್ರಮಾಣವಚನ ಸ್ವೀಕರಿಸುವ ಬದಲು ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಅಚ್ಚರಿಗೊಳಿಸಿದರು.

ಪ್ರಧಾನಿ ಮೋದಿ ಬಳಿಕ ಎರಡನೆಯವರಾಗಿ ಕೋಡಿಕುನ್ನಿಲ್​ ಸುರೇಶ್​ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಇವರಲ್ಲದೆ, ಬ್ರಜ್​ಭೂಷಣ್​ ಸರನ್​ ಸಿಂಗ್​ ಮತ್ತು ಭ್ರಾತುಹರಿ ಮಹತಾಬ್​ ಅವರನ್ನು ಲೋಕಸಭಾಧ್ಯಕ್ಷರ ಸಮಿತಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ನೇಮಿಸಿದ್ದರು. ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಇವರೆಲ್ಲರದ್ದಾಗಿದೆ.

ಜಮ್ಮು ಮತ್ತು ಕಾಶ್ಮೀರ ಮೂಲದವರಾದ ಪ್ರಧಾನಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ಜಿತೇಂದರ್​ ಸಿಂಗ್​ ಡೋಗ್ರಿ ಭಾಷೆಯಲ್ಲಿ, ಆಹಾರ ಸಂಸ್ಕರಣೆ ಸಚಿವೆ ಹರ್​ಸಿಮ್ರತ್​ ಕೌರ್​ ಮತ್ತು ಹೋಷಿಯಾರ್​ಪುರದ ಸಂಸತ್​ ಸದಸ್ಯ ಸೋಮ್​ ಪ್ರಕಾಶ್​ ಪಂಜಾಬಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಕೇಂದ್ರ ಸಚಿವರಾದ ರಾಮೇಶ್ವರ್​ ತೇಲಿ, ಕೃಪಾನಾಥ್​ ಮಲ್ಲ್ಹಾ ಮತ್ತು ನಬಾ ಕುಮಾರ್​ ಸಾರಾನಾಯ್​ ಅಸ್ಸಾಮಿ ಭಾಷೆಯಲ್ಲಿ, ರಾಯ್​ಗಂಜ್​ ಸಂಸತ್​ ಸದಸ್ಯ ದೇಬಶ್ರೀ ಚೌಧರಿ ಮತ್ತು ಸಿಲ್ಚಾರ್​ ಸಂಸತ್​ ಸದಸ್ಯ ರಾಜದೀಪ್​ ರಾಯ್​ ಬಂಗಾಳಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಆಂಧ್ರಪ್ರದೇಶದ ವಿವಿಧ ಕ್ಷೇತ್ರಗಳಿಂದ ಸಂಸತ್​ಗೆ ಆಯ್ಕೆಯಾಗಿರುವ ತಲಾರಿ ರಂಗಯ್ಯ, ವಂಗಾ ಗೀತಾವಿಶ್ವನಾಥ್​, ವೈ.ಎಸ್​. ಅವಿನಾಶ್​ ರೆಡ್ಡಿ, ಬೀಸೆಟ್ಟಿ ವೆಂಕಟ ಸತ್ಯವತಿ, ಅದಾಲಾ ಪ್ರಭಾಕರ ರೆಡ್ಡಿ, ಬೆಲ್ಲಣ್ಣ ಚಂದ್ರಶೇಖರ್​, ಗೊಡೆಟ್ಟಿ ಮಾಧವಿ, ಎಂ.ವಿ.ವಿ. ಸತ್ಯನಾರಾಯಣ, ಮರ್ಗಾನಿ ಭರತ್​, ಎನ್​. ರೆಡ್ಡೆಪ್ಪ, ಬಾಲಾಶೌರಿ ವಲ್ಲಭನೇನಿ, ನಂದಿಗಾಂ ಸುರೇಶ್​ ಮತ್ತು ಪೊಚ್ಚ ಬ್ರಹ್ಮಾನಂದ ರೆಡ್ಡಿ ತೆಲುಗು ಭಾಷೆಯಲ್ಲಿ ಪ್ರಮಾಣ ತೆಗೆದುಕೊಂಡರು. (ಏಜೆನ್ಸೀಸ್​)

Leave a Reply

Your email address will not be published. Required fields are marked *