Wednesday, 12th December 2018  

Vijayavani

Breaking News

ಬಸವಣ್ಣನ ನೆಲದಿಂದಲೇ ಧರ್ಮಯುದ್ಧ

Wednesday, 21.03.2018, 3:05 AM       No Comments

| ಪರಶುರಾಮ ಭಾಸಗಿ

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮದ ರೂವಾರಿ ಸಚಿವ ಎಂ.ಬಿ. ಪಾಟೀಲರ ತವರಿನಲ್ಲೀಗ ರಾಜಕೀಯ- ಧರ್ಮಯುದ್ಧ ಆರಂಭಗೊಂಡಿದೆ !

ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಮಾನ್ಯತೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ ಬೆನ್ನಲ್ಲೇ ಅಣ್ಣ ಬಸವಣ್ಣನ ಕರ್ಮಭೂಮಿಯಲ್ಲಿ ವೀರಶೈವ ಸಮಾವೇಶಕ್ಕೆ ವೇದಿಕೆ ಸಿದ್ಧಗೊಂಡಿದೆ. ಮಾರ್ಚ್ 25 ರಂದು ವಿಜಯಪುರದ ದರ್ಬಾರ್ ಮೈದಾನದಲ್ಲಿ 25 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಸಮಾವೇಶ ನಡೆಸಲು ತೀರ್ವನಿಸಲಾಗಿದೆ. ಪಂಚಪೀಠಾಧೀಶರ ಪೈಕಿ ನಾಲ್ವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಆಯೋಜಕ ಬಸವರಾಜ ಚೌಕಿಮಠ ತಿಳಿಸಿದ್ದಾರೆ.

ಪ್ರತ್ಯೇಕ ಧರ್ಮ ಸ್ಥಾಪನೆ ಹಾಗೂ ಅಲ್ಪಸಂಖ್ಯಾತ ಮಾನ್ಯತೆಗೆ ಸರ್ಕಾರ ಶಿಫಾರಸು ಮಾಡುತ್ತಿದ್ದಂತೆ ರಂಭಾಪುರಿಶ್ರೀ ಧರ್ಮಯುದ್ಧ ಆರಂಭಿಸುವ ಹೇಳಿಕೆ ನೀಡಿದ್ದಾರೆ. ತನ್ನಿಮಿತ್ತ ಬಸವ ಜನ್ಮಭೂಮಿಯಿಂದಲೇ ಯುದ್ಧ ಆರಂಭಿಸಲಾಗುತ್ತಿದ್ದು, ಬಳಿಕ ಬಾಗಲಕೋಟೆ, ಧಾರವಾಡ, ರಾಯಚೂರು ಮುಂತಾದೆಡೆ ಸಮಾವೇಶ ನಡೆಯಲಿದೆ. ಲಿಂಗಾಯತ ಪ್ರತ್ಯೇಕತೆಗೆ ಯಾರು ಹುನ್ನಾರ ನಡೆಸಿದರೋ ಅವರಿಗೆ ತಕ್ಕ ಪಾಠ ಕಲಿಸುವುದು ಸಮಾವೇಶದ ಉದ್ದೇಶಗಳಲ್ಲೊಂದು ಎನ್ನುತ್ತಾರೆ ಚೌಕಿಮಠ.

ಸಚಿವರಿಗೆ ಧರ್ಮ ಸಂಕಟ?: ಜ. 9 ರಂದು ವೀರಶೈವ ಹಾಗೂ ಲಿಂಗಾಯತ ಬಣಗಳು ಸಚಿವ ಎಂ.ಬಿ. ಪಾಟೀಲರ ಕ್ಷೇತ್ರದಲ್ಲಿ ಒಂದೇ ದಿನ ಕೂಗಳತೆ ದೂರದಲ್ಲಿ ವೇದಿಕೆ ಸಿದ್ಧಪಡಿಸಿ ಸಮಾವೇಶ ನಡೆಸಿದ್ದವು. ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟಿದ್ದ ಸಚಿವ ಪಾಟೀಲರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಗುರು ಶಾಂತವೀರ ಶ್ರೀ, ಬಸವೇಶ್ವರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿಪೂಜೆ ನೆರವೇರಿಸುವ ಮೂಲಕ ಪ್ರಮುಖ ಜಾತಿಯ ಮತಪೆಟ್ಟಿಗೆ ಭದ್ರ ಮಾಡಿಕೊಂಡಿದ್ದರು.

ಇದೀಗ ಮತ್ತೆ ಸಮಾವೇಶ ಹಮ್ಮಿಕೊಂಡಿದ್ದು ಕಾಂಗ್ರೆಸ್​ಗೆ ನುಂಗಲಾರದ ತುತ್ತಾಗಲಿದೆ. ಸಚಿವ ಪಾಟೀಲರು ಸಾರಥ್ಯ ವಹಿಸಿದ್ದಕ್ಕೆ ಕಾಂಗ್ರೆಸ್​ನ ಉಳಿದ ಶಾಸಕರು ಕೈಕೈ ಹೊಸಕಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಧರ್ಮ ಒಡೆದ ಪಟ್ಟ ಹೊರಿಸಿ ಕಾಂಗ್ರೆಸ್​ಅನ್ನು ಹಣಿಯಲು ತಂತ್ರ ಸಜ್ಜಾಗಿದೆ.

ರಂಭಾಪುರಿ ಶ್ರೀಗಳು ಹೇಳಿದಂತೆ ಧರ್ಮಯುದ್ಧ ಆರಂಭಿಸಲಾಗುವುದು. ಅದಕ್ಕೆ ವಿಜಯಪುರದಿಂದಲೇ ಮಾ. 25ರಂದು ಚಾಲನೆ ಸಿಗಲಿದ್ದು, ಹೋರಾಟದ ಮುಂಚೂಣಿಯಲ್ಲಿರುವ ಜನಪ್ರತಿನಿಧಿಗಳಿಗೆ ತಪ್ಪಿನ ಅರಿವು ಮಾಡಿಸಲಾಗುವುದು.

| ಬಸವರಾಜ ಚೌಕಿಮಠ ಆಯೋಜಕ


ಸ್ಥಾನಮಾನ ಇಕ್ಕಟ್ಟಿನಲ್ಲಿ ಸರ್ಕಾರ!

ಬೆಂಗಳೂರು: ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ಕೇಂದ್ರಕ್ಕೆ ಸರ್ಕಾರ ಶಿಫಾರಸು ಮಾಡಿದ ಬೆನ್ನಲ್ಲೇ ಬೇರೆ ಜಾತಿಗಳು ವಿವಿಧ ಸ್ಥಾನಮಾನಗಳಿಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಲಿಂಗಾಯತರಿಗೆ ನೀಡಿರುವುದಕ್ಕೂ ಬೇರೆ ಜಾತಿಗಳ ಬೇಡಿಕೆಗೂ ವ್ಯತ್ಯಾಸ ಇದ್ದರೂ ತಕ್ಷಣ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ತಲೆದೋರಿದೆ.

ಇತರ ಸಮಾಜಗಳ ಬೇಡಿಕೆ: ಸವಿತಾ ಸಮಾಜ ಹಾಗೂ ಮಡಿವಾಳ ಸಮಾಜ ಪರಿಶಿಷ್ಟರ ಸ್ಥಾನಮಾನಕ್ಕೆ ಬೇಡಿಕೆ ಸಲ್ಲಿಸಿವೆ. ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಒತ್ತಾಯ ಮಾಡುತ್ತಿದೆ. ಗಂಗಾ ಮತಸ್ಥರು ಹಾಗೂ ಗೊಲ್ಲರಿಗೆ ಸಂಬಂಧಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಆ ಸಮುದಾಯಗಳು ಕೇಂದ್ರದ ಮೇಲೆ ಒತ್ತಡ ತರುವಂತೆ ಆಗ್ರಹಿಸುತ್ತಿವೆ.

ಸವಿತಾ ಸಮಾಜ ಹಾಗೂ ಮಡಿವಾಳ ಸಮುದಾಯದ ಮುಖಂಡರು ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರ ಮೇಲೆ ಹೆಚ್ಚಿನ ಒತ್ತಡ ತರುತ್ತಿದ್ದಾರೆ. ಇಂತಹ ಒತ್ತಡಗಳು ಚುನಾವಣೆಯ ಸಂದರ್ಭದಲ್ಲಿ ಹೆಚ್ಚಾಗಬಹುದೆಂಬುದು ಸರ್ಕಾರದ ಆತಂಕಕ್ಕೆ ಕಾರಣವಾಗಿದ್ದು, ವಿವಿಧ ಸಮುದಾಯಗಳ ಬೇಡಿಕೆ ಬಗ್ಗೆ ಮೌನವಹಿಸಿದೆ ಎಂದು ಮೂಲಗಳು ಹೇಳಿವೆ.

ಧರ್ಮವಾ? ರಾಜಕಾರಣವಾ?

ಅಣ್ಣ ಬಸವಣ್ಣ ನೆಲೆಸಿದ ನಾಡಿನಲ್ಲಿ ಧರ್ಮಕ್ಕೂ ರಾಜಕೀಯಕ್ಕೂ ಜಗಳ ಶುರುವಾಗಿದೆ. ಮೂವರು ಜಗದ್ಗುರುಗಳನ್ನು ಕೊಡುಗೆಯಾಗಿ ನೀಡಿದ್ದು ಅವಿಭಜಿತ ವಿಜಯಪುರ ಜಿಲ್ಲೆ. ಶ್ರೀಶೈಲ, ಕೇದಾರ ಹಾಗೂ ಕಾಶಿ ಜಗದ್ಗುರುಗಳು ಮೂಲತಃ ವಿಜಯಪುರ- ಬಾಗಲಕೋಟೆಯವರು. ಇನ್ನು ಮಹಾತ್ಮ ಬಸವೇಶ್ವರರು ಕೂಡ ಇದೇ ನೆಲದಲ್ಲಿ ಹುಟ್ಟಿ ಐಕ್ಯಗೊಂಡವರು. ಇಂಥ ಪುಣ್ಯನೆಲದಲ್ಲಿ ಆರಂಭಗೊಂಡ ಧರ್ಮಯುದ್ಧದಲ್ಲಿ ಗೆಲುವು ಯಾರಿಗೆ ಸಿಗಲಿದೆ ಎಂಬ ಸಂದಿಗ್ಧತೆ ಎದುರಾಗಿದೆ. ಡಿ. 19 ರಂದು ಕಾಶಿ ಜಗದ್ಗುರುಗಳ ಸಮ್ಮುಖದಲ್ಲೇ ನಡೆದ ಜಾಗೃತಿ ಜಾಥಾ, ಪ್ರತಿಯಾಗಿ ಬಸವನಬಾಗೇವಾಡಿ ಶ್ರೀಗಳ ವಿರುದ್ಧ ನಡೆದ ಮಹಿಳೆಯರ ಪ್ರತಿಭಟನೆ, ಸಚಿವರ ಕ್ಷೇತ್ರದಲ್ಲಿ ನಡೆದ ಮಠಾಧೀಶರುಗಳ ಸಭೆ-ಸಮಾರಂಭಗಳು ಪರಿಸ್ಥಿತಿಯನ್ನು ತಾರಕಕ್ಕೆ ಕೊಂಡೊಯ್ದಿದ್ದವು. ಇದೀಗ ಮತ್ತೊಂದು ಸಮಾವೇಶಕ್ಕೆ ಮುಂದಾಗಿದ್ದು ಜನರ ಮುಂದೆ ‘ಧರ್ಮವಾ-ರಾಜಕಾರಣವಾ? ಎಂಬ ಎರಡು ಆಯ್ಕೆಗಳಿವೆ.

ಲಿಂಗಾಯತರು ಹಾಗೂ ಬಸವ ತತ್ವ ಒಪ್ಪಿಕೊಳ್ಳುವ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಮತ್ತು ಅದಕ್ಕೆ ಅಲ್ಪ ಸಂಖ್ಯಾತ ಸ್ಥಾನ ಮಾನ ನೀಡುವ ಕುರಿತಂತೆ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವು ಗೊಂದಲದಿಂದ ಕೂಡಿದೆ. ಸರ್ಕಾರದ ನಿರ್ಧಾರವು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಾಗಿದೆ.

| ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ

ಕೆರಳಿದ ವೀರಶೈವ ಮಹಾಸಭಾ

ಬೆಂಗಳೂರು: ಧರ್ಮ ವಿಭಜನೆ ಕುರಿತಂತೆ ರ್ಚಚಿಸಲು ವೀರಶೈವರ ಪ್ರಾತಿನಿಧಿಕ ಸಂಸ್ಥೆ ಅಖಿಲ ಭಾರತ ವೀರಶೈವ ಮಹಾಸಭೆಯ ಮಹತ್ವದ ನಿರ್ಣಾಯಕ ಸಭೆ ಮಾರ್ಚ್ 23ರಂದು ನಡೆಯಲಿದೆ.

ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2ಕ್ಕೆ ಬೆಂಗಳೂರಿನ ಮಹಾಸಭಾದ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಮುಖ ವೀರಶೈವ ಮುಖಂಡರು, ಮಹಾಸಭಾ ಪದಾಧಿಕಾರಿಗಳು ಹಾಗೂ ಮಠಾಧೀಶರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ರಾಜ್ಯ ಸರ್ಕಾರ ಆರಂಭದಿಂದಲೂ ಲಿಂಗಾಯತರಿಗೆ ಮಾತ್ರ ಪ್ರತ್ಯೇಕ ಸ್ಥಾನಮಾನ ನೀಡಲು ಮುಂದಾಗಿದೆ ಎಂದೇ ಮಹಾಸಭಾ ಆಕ್ಷೇಪ ವ್ಯಕ್ತಪಡಿಸುತ್ತ ಬಂದಿತ್ತು. ಇದೀಗ ರಾಜ್ಯ ಸಚಿವ ಸಂಪುಟದ ನಿರ್ಧಾರ ಗೋಡೆ ಮೇಲೆ ದೀಪವಿರಿಸಿದಂತೆ ಆಗಿದೆ ಎಂದು ವೀರಶೈವ ಸಮುದಾಯದಲ್ಲಿ ಅಸಮಾಧಾನ ಕುದಿಯುತ್ತಿದೆ. ಅದರಲ್ಲೂ ಲಿಂಗಾಯತ ಹಾಗೂ ಬಸವ ತತ್ವ ಅನುಸರಿಸುವ ವೀರಶೈವ ಲಿಂಗಾಯತರಿಗೆ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಸರ್ಕಾರ ಶಿಫಾರಸು ಮಾಡಿರುವುದು ಲಿಂಗಾಯತರನ್ನು ವೀರಶೈವ ಬಣದಿಂದ ದೂರ ಮಾಡುವ ಜತೆಗೆ ವೀರಶೈವರನ್ನೇ ಇಬ್ಭಾಗ ಮಾಡುವ ಸಂಚು ಎಂಬ ಆರೋಪವೂ ಕೇಳಿಬರುತ್ತಿದೆ.

ನಾಲ್ಕು ದಶಕಗಳಿಂದ ಅಖಿಲ ಭಾರತ ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. ಸಾಕಷ್ಟು ಬೆಳವಣಿಗೆಗಳ ಬಳಿಕ 2013ರಲ್ಲಿ ಕೇಂದ್ರ ಸಚಿವ ಸಂಪುಟದ ಉಪ ಸಮಿತಿ ರಚನೆಯೊಂದಿಗೆ ಆ ವಿಷಯ ನಿಂತು ಹೋಗುತ್ತದೆ. ಇದೀಗ ವೀರಶೈವದಿಂದ ಲಿಂಗಾಯತ ಪ್ರತ್ಯೇಕಗೊಳಿಸುವ ಹೋರಾಟದ ಹಿಂದೆ ರಾಜಕೀಯ ಒಳಸಂಚು ನಡೆಯುತ್ತಿದೆ ಎಂಬುದು ಮಹಾಸಭಾದ ಕೊರಗು. ಈ ಹಿನ್ನೆಲೆಯಲ್ಲಿ ಮಾ.23ರ ತುರ್ತಸಭೆಯಲ್ಲಿ ವೀರಶೈವರ ಮುಂದಿನ ನಡೆ ಏನಾಗಬೇಕು ಎಂಬಿತ್ಯಾದಿ ಬಗ್ಗೆ ವ್ಯಾಪಕ ಚರ್ಚೆ ನಡೆಯಲಿದೆ ಎಂದು ಮಹಾಸಭಾ ಮೂಲಗಳು ತಿಳಿಸಿವೆ.

ಮಾನದಂಡ ಏನು?

‘ಬಸವ ತತ್ವ ಅನುಸರಿಸುವ ವೀರಶೈವ ಲಿಂಗಾಯತರು’ ಎಂಬ ಶಬ್ದ ಮಹಾಸಭಾ ಕೆರಳಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ಹಾಗೆನ್ನಲು ಮಾನದಂಡ ಯಾವುದು? ಬಸವ ತತ್ವವನ್ನು ವೀರಶೈವ-ಲಿಂಗಾಯತರಲ್ಲದೆ ಎಲ್ಲ ಜಾತಿ-ಜನಾಂಗ-ಧರ್ಮದವರೂ ಒಪು್ಪತ್ತಾರೆ. ವೀರಶೈವರಲ್ಲಿ ಬಸವ ತತ್ವ ಅನುಸರಿಸದಿರುವವರು ಇದ್ದಾರೆಂದು ಸರ್ಕಾರವೇ ಭಾವಿಸಿದಂತಿದೆ. ಈ ರೀತಿ ವಿಘಟಕ ಉದ್ದೇಶದಿಂದ ಅಲ್ಪಸಂಖ್ಯಾತರ ಮಾನ್ಯತೆ ನೀಡಲು ಮುಂದಾಗಿದ್ದಕ್ಕೆ ಮಹಾಸಭಾ ತೀವ್ರ ಅಸಮಾಧಾನಗೊಂಡಿದೆ.


ಧರ್ಮ ಸ್ಥಾಪನೆಗೆ ಬೇಕಿದೆ ಸ್ಪಷ್ಟನೆ

ಕೊಪ್ಪಳ: ಅಲ್ಪಸಂಖ್ಯಾತ ಕಾಯ್ದೆ 2(ಡಿ) ಅಡಿ ಲಿಂಗಾಯತ, ವೀರಶೈವ ಲಿಂಗಾಯತ ಧರ್ಮ ಎಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ ಧರ್ಮಸ್ಥಾಪನೆ ವಿಷಯದಲ್ಲಿ ಅನೇಕ ಸ್ಪಷ್ಟನೆಗಳು ಸಿಗಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸೌಲಭ್ಯ ಸಿಗಲು ಇನ್ನೂ 10-15 ವರ್ಷಗಳಾಗಬಹುದು. ಕೇಂದ್ರ ಮತ್ತು ರಾಜ್ಯಗಳು ಕಾನೂನಿನಲ್ಲಿ ಕೆಲ ತಿದ್ದುಪಡಿ ತರಬೇಕಿದೆ. ರಾಜ್ಯ ಕಳುಹಿಸುವ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪುವುದೋ, ಇಲ್ಲವೋ ಗೊತ್ತಿಲ್ಲ. ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದು ತಾಲೂಕಿನ ಅಳವಂಡಿ ಗ್ರಾಮದಲ್ಲಿ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

ಗುಜರಾತ್, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಸೇರಿ ಇತರ ರಾಜ್ಯಗಳಲ್ಲೂ ಲಿಂಗಾಯತ ಸಮುದಾಯ ದವರಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈಗಾಗಲೇ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿದೆ. ಎಲ್ಲ ರಾಜ್ಯಗಳನ್ನೂ ಗಣನೆಗೆ ತೆಗೆದುಕೊಂಡು ಕೇಂದ್ರ ಅಲ್ಪಸಂಖ್ಯಾತ ಸ್ಥಾನಮಾನ ಕೊಡಬೇಕು. ಲಿಂಗಾಯತರ ಧಾರ್ವಿುಕ ಆಚರಣೆ ವಿಷಯದಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ವೀರಶೈವ ಪರಂಪರೆ ಹಿಂದು ಧರ್ಮದ ಒಂದು ಭಾಗ. ಅದರಲ್ಲಿ ಅನೇಕ ಶೋಷಣೆಗಳಿವೆ. ಇದನ್ನು ವೀರಶೈವ ಮಠಾಧೀಶರು ಅರಿತು ಲಿಂಗಾಯತರೊಂದಿಗೆ ಒಟ್ಟಾಗಿ ರ್ಚಚಿಸಿದಾಗ ಮಾತ್ರ ಅಲ್ಪಸಂಖ್ಯಾತ ಸ್ಥಾನಮಾನದ ಜತೆಗೆ ಶೈಕ್ಷಣಿಕ, ಆರ್ಥಿಕ, ಉದ್ಯೋಗದಲ್ಲಿ ಸೌಲಭ್ಯ ಸಿಗಲಿದೆ. ಇದಕ್ಕಾಗಿ ಪ್ರತ್ಯೇಕ ಕಾನೂನು ಜಾರಿಯಾಗಬೇಕು. ಇನ್ನೂ ಅನೇಕ ಕೆಲಸಗಳು ಇರುವ ಕಾರಣ ಎರಡು ಕಡೆಯವರು, ಅದರಲ್ಲೂ ರಂಭಾಪುರಿ ಶ್ರೀಗಳು ಮುಂದೆ ಬಂದು ರ್ಚಚಿಸಬೇಕೆಂದು ಮನವಿ ಮಾಡಿದರು.


23ರವರೆಗೂ ಬಿಜೆಪಿ ಕಾದು ನೋಡುವ ತಂತ್ರ

ಬೆಂಗಳೂರು: ಅಲ್ಪಸಂಖ್ಯಾತ ಸ್ಥಾನಮಾನದೊಂದಿಗೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ರಾಜ್ಯ ಸರ್ಕಾರ ತೀರ್ವನಿಸಿರುವುದರಿಂದ ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮುಖಂಡರು ಬಂದಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲಿ ಮಂಗಳವಾರ ಸಭೆ ಸೇರಿದ್ದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್​ಕುಮಾರ್ ಹಾಗೂ ಇತರ ಮುಖಂಡರು ಸರ್ಕಾರದ ಈ ನಿರ್ಧಾರದಿಂದ ಪಕ್ಷಕ್ಕೆ ಹಾನಿ ಆಗುವುದೇ ಅಥವಾ ಕಾಂಗ್ರೆಸ್​ಗೆ ತಿರುಗುಬಾಣವಾಗುವುದೇ ಎಂಬ ಬಗ್ಗೆ ರ್ಚಚಿಸಿದರು. ಬಿಜೆಪಿಯ ಮತಬ್ಯಾಂಕ್ ಇಬ್ಭಾಗ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಈ ಕೆಲಸ ಮಾಡಿದ್ದು, ಅದಕ್ಕೆ ಅವಕಾಶ ನೀಡಬಾರದೆಂಬ ಚರ್ಚೆಯೂ ನಡೆದಿದೆ.

ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿದರೂ ಅದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ತಟಸ್ಥವಾಗಿರಬೇಕು ಎಂದು ನಿರ್ಧರಿಸುವ ಜತೆಗೆ, ಅಖಿಲ ಭಾರತ ವೀರಶೈವ ಮಹಾಸಭಾದ ಮಾ. 23ರ ಸಭೆಯ ನಿರ್ಧಾರಕ್ಕೆ ಬದ್ಧವಾಗಿರಬೇಕು ಎಂದು ನಿರ್ಧರಿಸಿದೆ.

ಸರ್ಕಾರದ ವಿರುದ್ಧ ಕಾರ್ಯತಂತ್ರ: ವೀರೇಂದ್ರ ಪಾಟೀಲ್ ನಿಧನಾನಂತರ ಲಿಂಗಾಯತ ಸಮುದಾಯ ಬಿಜೆಪಿಗೆ ಬಂದಿದೆ. ಯಾವುದೇ ಕಾರಣಕ್ಕೂ ಈ ಮತಬ್ಯಾಂಕ್ ಕಳೆದುಕೊಳ್ಳಬಾರದು. ಅಲ್ಲದೆ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡುವಂತೆ ಪ್ರಧಾನಿಗೆ ಮನವರಿಕೆ ಮಾಡಿಕೊಡಲು ತೀರ್ವನಿಸಲಾಗಿದೆ.

ಷಾ-ಬಿಎಸ್​ವೈ ಚರ್ಚೆ: ಸರ್ಕಾರದ ಈ ನಿರ್ಧಾರ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜತೆ ಯಡಿಯೂರಪ್ಪ ರ್ಚಚಿಸಿದ್ದು, ಮತಬ್ಯಾಂಕ್ ಛಿದ್ರವಾಗಲು ಅವಕಾಶ ನೀಡುವುದಿಲ್ಲವೆಂದು ಮನವರಿಕೆ ಮಾಡಿಕೊಟ್ಟಿರುವುದಾಗಿ ಪಕ್ಷದ ಮೂಲಗಳು ಖಚಿತಪಡಿಸಿವೆ.


ಹಿಂದು ಧರ್ಮ ಒಡೆಯಲು ಸಾಧ್ಯವಿಲ್ಲ

ತುಮಕೂರು: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸ್ವಾಗತಿಸಿದ್ದಾರೆ.

ಲಿಂಗಾಯತ ಹಾಗೂ ವೀರಶೈವ ಎರಡನ್ನೂ ಸೇರಿಸಿ ಸರ್ಕಾರ ಶಿಫಾರಸು ಮಾಡಿರುವುದು ಒಳ್ಳೆಯ ಬೆಳವಣಿಗೆ. ಲಿಂಗಾಯತ ಪ್ರತ್ಯೇಕ ಧರ್ಮದಿಂದ ಹಿಂದು ಧರ್ಮಕ್ಕೆ ಧಕ್ಕೆ ಬರುವುದಿಲ್ಲ. ಹಿಂದು ಧರ್ಮ ವಿಶಾಲ ಭಾವನೆ ಹೊಂದಿದ್ದು, ಅದನ್ನು ಒಡೆಯಲು ಸಾಧ್ಯವಿಲ್ಲ ಎಂದು ಶ್ರೀಗಳು ಸುದ್ದಿಗಾರರಿಗೆ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಜೈನ ಹಾಗೂ ಬೌದ್ಧ ಧರ್ಮ ಪ್ರತ್ಯೇಕವಾದರೂ ಹಿಂದು ಧರ್ಮದ ಆಚರಣೆ ಒಳಗೊಂಡಿವೆ. ಹಾಗಾಗಿ, ಲಿಂಗಾಯತ ಸ್ವತಂತ್ರ ಧರ್ಮವಾದರೆ ಹಿಂದು ಧರ್ಮಕ್ಕೇನೂ ತೊಂದರೆ ಆಗುವುದಿಲ್ಲ. ಬಸವಣ್ಣ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದು ಶ್ರೀಗಳು ಪ್ರತಿಪಾದಿಸಿದ್ದಾರೆ.


ತಪ್ಪು ಸರಿಪಡಿಸಲು ಸಿಎಂ ಮುಂದಾಗಲಿ

ದಾವಣಗೆರೆ: ಈಗಲೂ ಕಾಲ ಮಿಂಚಿಲ್ಲ, ಧರ್ಮ ವಿಘಟನೆಗೆ ಪ್ರೋತ್ಸಾಹಿಸಿದ ಸಿಎಂ ಸಿದ್ದರಾಮಯ್ಯ ಅದನ್ನು ಸರಿಪಡಿಸಿ ಸಮಾಜ ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಲಿ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಆಗ್ರಹಿಸಿದರು.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ತಜ್ಞರ ಸಮಿತಿ ವರದಿ ದೂರ ಮಾಡಿ ವೀರಶೈವ ಲಿಂಗಾಯತ ಒಂದೇ ಎನ್ನುವ ಭಾವನೆ ಬರುವಂತೆ ಸಿಎಂ ನಡೆದುಕೊಳ್ಳಲಿ ಎಂದು ಸಲಹೆ ನೀಡಿದರು. ತಪ್ಪು ಸರಿಪಡಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಕಷ್ಟವಾಗಲಿದೆ. ಇಷ್ಟಾಗಿಯೂ ಒಂದು ವೇಳೆ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದರೆ ಶಾಂತಿಯುತ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಕಾನೂನು ದೃಷ್ಟಿಯಿಂದಲೂ ಮುಂದಿನ ಹೆಜ್ಜೆ ಇಡುವ ಕುರಿತು ಚಿಂತನೆ ನಡೆದಿದೆ ಎಂದರು.

Leave a Reply

Your email address will not be published. Required fields are marked *

Back To Top