ಲಿಂಗಾಯತ ಸ್ವತಂತ್ರ ಧರ್ಮ

ಚಾಮರಾಜನಗರ: 12ನೇ ಶತಮಾನದಲ್ಲಿ ಶರಣರ ವಚನಗಳಲ್ಲಿ ಲಿಂಗಾಯತ ಪದವಿಲ್ಲ ಎಂಬ ವಾದಕ್ಕೆ ಅರ್ಥವಿಲ್ಲ. ಸರ್ಕಾರ ಮಾನ್ಯತೆ ಕೊಡಲಿ, ಬಿಡಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣ ಅವರು ಯಾವುದೇ ಮಠಾಧೀಶ, ಧರ್ಮಗುರು, ಜಗದ್ಗುರು ಆಗಿರಲಿಲ್ಲ. ಬದಲಿಗೆ ಅವರು ಗೃಹಸ್ಥ ಜಗದ್ಗುರು ಆಗಿದ್ದರು. ಜತೆಗೆ ಇಷ್ಟಲಿಂಗದ ಆರಾಧನೆಯನ್ನು ಜಾರಿಗೆ ತಂದರು. ಮನುಕುಲವನ್ನು ಒಪ್ಪಿಕೊಳ್ಳುವ ಧರ್ಮವಿದ್ದರೆ, ಅದು ಲಿಂಗಾಯತ ಧರ್ಮ ಮಾತ್ರ. ಹಿಂದು ಎಂಬುದು ಧರ್ಮವಲ್ಲ ಅದು ಜೀವನ ವಿಧಾನ ಎಂದು ಹೇಳಿದರು.
ಕೂಡಲ ಸಂಗಮದ ಶ್ರೀಬಸವ ಮೃತ್ಯುಂಜಯಸ್ವಾಮೀಜಿ ಮಾತನಾಡಿ, ಜಿಲ್ಲೆ ಶರಣರ ನಾಡಾಗಿದ್ದು, ಗಟ್ಟಿ ಜಿಲ್ಲೆಯಾಗಿದೆ. ಬಿತ್ತಿ ಬೆಳೆದ ಲಿಂಗಾಯತ ಧರ್ಮಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಬೇಕು. ಹಿಂದೆ ಹಿರಿಯರು ಮಾಡಿದ ತಪ್ಪು ಅನುಭವಿಸುತ್ತಿದ್ದೇವೆ. ಲಿಂಗಾಯತ ಧರ್ಮ ಇತರೆ ಧರ್ಮಗಳಿಗಿಂತಲೂ ಮುಂಚೂಣಿಯಲ್ಲಿರುವ ಧರ್ಮವಾಗಿದೆ. ಇಲ್ಲಿರುವ 99 ಉಪಜಾತಿಗಳು ಒಟ್ಟಾಗಿ ಕೂಡಿ ಸಾಮಾಜಿಕ ನ್ಯಾಯವನ್ನು ಪಡೆಯಬೇಕಿದೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ.ಪಾಟೀಲ್,ಮುಡಿಗುಂಡ ವಿರಕ್ತಮಠದ ಶ್ರೀಕಂಠಸ್ವಾಮೀಜಿ, ಚಿಕ್ಕಮಗಳೂರು ಎನ್.ಆರ್.ಪುರದ ಬಸವಯೋಗಿಪ್ರಭುಸ್ವಾಮೀಜಿ, ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತಸ್ವಾಮಿ, ಮಹದೇವಪ್ಪ, ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಹಾಜರಿದ್ದರು.

ವೀರಶೈವ ಮುಖಂಡರಿಂದ ಆಕ್ಷೇಪ
ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನೆಗೆ ವೀರಶೈವ ಮಹಾಸಭಾದ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದರು.
ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಸ್ವಾಗತ ಭಾಷಣ ಆರಂಭಿಸುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿದ್ದ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸವಪ್ಪ, ತಾಲೂಕು ಅಧ್ಯಕ್ಷ ಮೂಡ್ಲುಪುರ ನಂದೀಶ್, ಇತರೆ ಮುಖಂಡರು ಜಾಗತಿಕ ಲಿಂಗಾಯತ ಮಹಾಸಭಾದ ಅವಶ್ಯಕತೆ ನಮಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಮಾರಂಭದಲ್ಲಿ ಕೆಲಕಾಲ ಗೊಂದಲ ಏರ್ಪಟ್ಟಿತ್ತು.