ಹಾರೂಗೇರಿ: ಯಾವುದೇ ಜಾತಿ ಧರ್ಮಕ್ಕೆ ಒಳಪಡದ ಲಿಂಗಾಯತರು ಸ್ವತಂತ್ರ ಧರ್ಮದವರು. ಬಸವೇಶ್ವರರು ಲಿಂಗಾಯತ ಧರ್ಮದ ಸಂಸ್ಥಾಪಕರಲ್ಲ.ಅವರು ವಚನಗಳನ್ನು ರಚಿಸಿಲ್ಲ ಎಂದು ಕೆಲ ದುರುಳರು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಸವರಾಜ ರೊಟ್ಟಿ ಹೇಳಿದರು.

ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಸೇವಾ ದೀಕ್ಷಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನೂತನ ಅಧ್ಯಕ್ಷ ಚಂದ್ರಶೇಖರ ಗುಡಸಿ ಮಾತನಾಡಿ, ನಮ್ಮ ಲಿಂಗಾಯತ ಧರ್ಮದ ಒಳಿತಿಗಾಗಿ ಟೊಂಕ ಕಟ್ಟಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಘಟಕವನ್ನು ರಾಜ್ಯದಲ್ಲಿಯೇ ಸಂಘಟನಾತ್ಮಕವಾಗಿ ಮಾದರಿಯಾಗುವಂತೆ ಮಾಡುತ್ತೇನೆ ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲಾ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಸ್.ವೈ.ಹಂಜಿ ಅವರು ಶಾಲು ಹಾಕಿ ಧ್ವಜ ಹಸ್ತಾಂತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ವಿಚಾರ ವಾಹಿಣಿ ಅಧ್ಯಕ್ಷ ಐ.ಆರ್.ಮಠಪತಿ, ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಸಿ.ಎಂ.ಬೂದಿಹಾಳ, ಎಸ್.ಎಲ್.ಬಾಡಗಿ, ಮಹೇಶ ಮುಂಗುರವಾಡಿ, ಬಸವರಾಜ ತುಳಸಿಗೇರಿ, ಜಗದೀಶ ಪಾಟೀಲ ಉಪಸ್ಥಿತರಿದ್ದರು. ಪ್ರೊ.ಸಂತೋಷ ತಮದಡ್ಡಿ ಸ್ವಾಗತಿಸಿದರು. ಶ್ರೀಶೈಲ ಭದ್ರಪ್ಪಗೋಳ ನಿರೂಪಿಸಿದರು. ಡಾ. ಬಸವರಾಜ ಹೊಸಪೇಟಿ ವಂದಿಸಿದರು.