ಗೋದಾಮಿನಲ್ಲಿ ಕೃಷಿ ಸಲಕರಣೆಗಳು ಪತ್ತೆ, ಪಶು ಸಂಗೋಪನಾ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

ಲಿಂಗಸುಗೂರು: ಪಟ್ಟಣದ ಪಶು ಸಂಗೋಪನಾ ಇಲಾಖೆ ಕಚೇರಿಗೆ ಶನಿವಾರ ಏಕಾಏಕಿ ಮುತ್ತಿಗೆ ಹಾಕಿದ ರೈತ ಮುಖಂಡರು ಗೋದಾಮು ಹಾಗೂ ಕಟ್ಟಡದಲ್ಲಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಕೃಷಿ ಪರಿಕರಗಳನ್ನು ಪತ್ತೆ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿ ಪಕ್ಕದಲ್ಲಿನ ಪರಿಕರಗಳಿರುವ ಗೋದಾಮು ಮತ್ತು ಕಟ್ಟಡದ ಬೀಗ ತೆರೆಯುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು. ವೈದ್ಯಾಧಿಕಾರಿಗಳ ಅನುಮತಿ ಇಲ್ಲದೆ ಬೀಗ ತೆಗೆಯಲ್ಲ ಎಂದರು. ವೈದ್ಯಾಧಿಕಾರಿ ಡಾ.ರಾಚಪ್ಪರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ 10 ನಿಮಿಷದಲ್ಲಿ ಬರುವುದಾಗಿ ಹೇಳಿ ಅರ್ಧಗಂಟೆಯಾದರೂ ಬರಲಿಲ್ಲ. ಪುನಃ ವೈದ್ಯರನ್ನು ಸಂಪರ್ಕಿಸಿದಾಗ ಬೀಗ ತೆಗೆಯುವಂತೆ ಸಿಬ್ಬಂದಿಗೆ ಸೂಚಿಸಿದರು. ಬೀಗ ತೆರೆಯುತ್ತಿದ್ದಂತೆ, ಅಪಾರ ಪ್ರಮಾಣದ ಕೃಷಿ ಪರಿಕರಗಳು ಕಣ್ಣಿಗೆ ಬಿದ್ದವು. ಸರ್ಕಾರ ರಿಯಾಯಿತಿ ದರದಲ್ಲಿ ರೈತರಿಗೆ ನೀಡಬೇಕಿದ್ದ ಮೇವು ಕತ್ತರಿಸುವ ಯಂತ್ರ, ಕೋಳಿ ಸಾಕಣೆಗೆ ಸಂಬಂಧಿಸಿದ ಪ್ಲಾಸ್ಟಿಕ್ ಪರಿಕರಗಳು, ಮೇವಿನ ಬೀಜ, ಪಶು ಆಹಾರ ಪದಾರ್ಥ ಸೇರಿದಂತೆ ಅಪಾರ ಪ್ರಮಾಣದ ಔಷಧ ಹಾಗೂ ಪರಿಕರಗಳಿಗೆ ಧೂಳು ಹಿಡಿದಿರುವುದು ರೈತರ ಆಕ್ರೋಶಕ್ಕೆ ಕಾರಣವಾಯಿತು.

ತನಿಖೆಗೆ ಆಗ್ರಹ
ಸರ್ಕಾರ ರೈತರ ಕೃಷಿ ಚಟುವಟಿಕೆಗೆ ಉಪಯೋಗಿಸಲು ನಾನಾ ಯೋಜನೆಯಡಿ ಅನೇಕ ಪರಿಕರಗಳನ್ನು ಒದಗಿಸುತ್ತಿದೆ. ಆದರೆ ಅರ್ಹ ಫಲಾನುಭವಿಗಳಿಗೆ ನೀಡದೆ ಕೊಠಡಿಗಳಲ್ಲಿ ಇಟ್ಟಿರುವುದು ಖಂಡನೀಯ. ಪರಿಕರಗಳು ಸಂಗ್ರಹವಿರುವ ಕುರಿತು ಸಂಬಂಧಿಸಿದ ಇಲಾಖೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಹಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಶು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪರಿಕರಗಳ ಕೊಠಡಿ ಬೀಗ ತೆಗೆಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರೈತರು ಆಗ್ರಹಿಸಿದರು.

Leave a Reply

Your email address will not be published. Required fields are marked *