ಗ್ರಾಮ, ಹೋಟೆಲ್ ವಾಸ್ತವ್ಯ ಕೈಬಿಡಿ – ಸಿಎಂ ಕುಮಾರಸ್ವಾಮಿಯನ್ನು ಕುಟುಕಿದ ಸುರಪುರ ಶಾಸಕ ರಾಜೂಗೌಡ

ಲಿಂಗಸುಗೂರು: ಮೈತ್ರಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಸಿಎಂ ಗ್ರಾಮ ಹಾಗೂ ಹೋಟೆಲ್ ವಾಸ್ತವ್ಯ ಕೈಬಿಟ್ಟು ವಿಧಾನಸೌಧದಲ್ಲಿ ಕುಳಿತು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಸುರಪುರ ಶಾಸಕ ರಾಜೂಗೌಡ ಎಂದು ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾನುಭವ ಮಂಟಪದಲ್ಲಿ ನೂತನ ಸಂಸದ ರಾಜಾ ಅಮರೇಶ್ವರ ನಾಯಕಗೆ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಿಎಂ ಕುಮಾರಸ್ವಾಮಿ ಈ ಹಿಂದೆ ಕೈಗೊಂಡಿದ್ದ ಗ್ರಾಮ ವಾಸ್ತವ್ಯ ಈಗ ವರ್ಕೌಟ್ ಆಗದು. ಗ್ರಾಮ ವಾಸ್ತವ್ಯಕ್ಕೆ ಜನರು ಬರುವುದಿಲ್ಲ ಎಂದು ಅರಿತು ಶಾಲೆಯಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಗ್ರಾಮ, ಹೋಟೆಲ್ ವಾಸ್ತವ್ಯ ಕೈಬಿಟ್ಟು ಅವರು ಆಡಳಿತ ಯಂತ್ರ ಚುರುಕುಗೊಳಿಸಲು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಬಿಜೆಪಿಗೆ ನೀಡುವ ಮೂಲಕ ಜೆಡಿಎಸ್, ಕಾಂಗ್ರೆಸ್‌ನ್ನು ಜನರು ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಬರ ಇರುವುದರಿಂದ ರೈತರು, ಕೃಷಿ ಕೂಲಿಕಾರರು ಗುಳೆ ಹೋಗುತ್ತಿದ್ದು, ಕುಡಿವ ನೀರಿಗೆ ಸಂಕಷ್ಟ ಎದುರಾಗಿದೆ. ಸಮರ್ಪಕ ಬರ ನಿರ್ವಹಣೆಗೆ ಸಚಿವರು, ಶಾಸಕರು ಅಧಿಕಾರಿಗಳ ಸಭೆ ನಡೆಸಿ ಚುರುಕು ಮುಟ್ಟಿಸುವ ಬದಲು ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದು, ಸರ್ಕಾರ ಪತನಕ್ಕೆ ದಿನಗಣನೆ ಆರಂಭಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪುನ ರಚನೆ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಕಾಂಗ್ರೆಸ್ ಭದ್ರ ಕೋಟೆ ಬೇಧಿಸಲು ಲಿಂಗಸುಗೂರು ಕ್ಷೇತ್ರದ ಮತದಾರರು ಅಧಿಕ ಮತ ನೀಡಿ ಬಿಜೆಪಿ ಗೆಲುವಿಗೆ ಕಾರಣರಾಗಿದ್ದಾರೆ. ಸರಳ, ಸಜ್ಜನಿಕೆಯ ಸಂಸದ ರಾಜಾ ಅಮರೇಶ್ವರ ನಾಯಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ನೂತನ ಸಂಸದ ರಾಜಾ ಅಮರೇಶ್ವರ ನಾಯಕಗೆ ಸನ್ಮಾನಿಸಲಾಯಿತು. ಶಾಸಕ ಡಾ.ಶಿವರಾಜ ಪಾಟೀಲ್, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮಾಜಿ ಶಾಸಕ ಗಂಗಾಧರ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಜಿಪಂ ಮಾಜಿ ಸದಸ್ಯ ರಾಜಾ ಶ್ರೀನಿವಾಸ್ ನಾಯಕ, ಮುಖಂಡರಾದ ಆರ್.ತಿಮ್ಮಯ್ಯ, ಗಿರಿಮಲ್ಲನಗೌಡ ಪಾಟೀಲ್, ಡಾ.ಶಿವಬಸಪ್ಪ, ವೀರನಗೌಡ ಲೆಕ್ಕಿಹಾಳ, ಲಕ್ಷ್ಮಿಕಾಂತರೆಡ್ಡಿ, ದೊಡ್ಡನಗೌಡ ಹೊಸಮನಿ, ನರಸಿಂಹ ನಾಯಕ, ಗಜೇಂದ್ರ ನಾಯಕ, ಹನುಮಂತಪ್ಪ ತೊಗರಿ ಇದ್ದರು.