ಅಧಿಕಾರಿ ಕುಟುಂಬಕ್ಕೆ ಸಚಿವ ಸಾಂತ್ವನ

ಕುಟುಂಬಕ್ಕೆ ಸೌಲಭ್ಯ ನೀಡುವುದಾಗಿ ಭರವಸೆ>

ಲಿಂಗಸುಗೂರು (ರಾಯಚೂರು): ಮರಳು ಮಾಫಿಯಾಗೆ ಬಲಿಯಾದ ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರ ಸ್ವಗ್ರಾಮ ಚಿತ್ತಾಪುರಕ್ಕೆ ಸೋಮವಾರ ಭೇಟಿ ನೀಡಿದ ಸಚಿವ ವೆಂಕಟರಾವ್ ನಾಡಗೌಡ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭ ಮಾತನಾಡಿದ ಸಾಹೇಬ್ ಪಟೇಲ್ ಪತ್ನಿ, ಅಬೀದಾ ಬೇಗಂ, ಉದ್ದೇಶ ಪೂರ್ವಕವಾಗಿ ನನ್ನ ಗಂಡನ ಮೇಲೆ ಲಾರಿ ಹಾಯಿಸಿ ಹತ್ಯೆ ಮಾಡಲಾಗಿದೆ. ಸರ್ಕಾರಿ ಸೇವೆಯಲ್ಲಿ ತುಂಬಾ ಒತ್ತಡವಿರುವುದಾಗಿ ನನ್ನ ಬಳಿ ಹೇಳಿಕೊಂಡಿದ್ದರು. ಆದರೆ, ಇಂಥ ಘಟನೆ ನಡೆಯುತ್ತದೆಂದು ಕನಸಲ್ಲೂ ನಿರೀಕ್ಷಿಸಿರಲಿಲ್ಲ. ಭವಿಷ್ಯದಲ್ಲಿ ಇಂಥ ದುರ್ಘಟನೆಗಳು ನಡೆಯಬಾರದು. ಕೂಡಲೇ ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನಮಗೆ ಒದಗಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಸಚಿವರ ಎದುರು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಡಗೌಡ, ಈಗಾಗಲೇ ಲಾರಿ ಚಾಲಕ ಮತ್ತು ಕಂಪ್ಯೂಟರ್ ಆಪರೇಟರ್‌ರನ್ನು ಬಂಧಿಸಲಾಗಿದೆ. ತನಿಖೆ ತೀವ್ರಗೊಳಿಸಲಾಗಿದೆ. ತಪ್ಪಿತಸ್ಥರು ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಆರು ತಿಂಗಳಲ್ಲಿ ಅನುಕಂಪದ ಆಧಾರದ ಮೇಲೆ ಅರ್ಹತೆಗೆ ತಕ್ಕಂತೆ ಸರ್ಕಾರಿ ನೌಕರಿ ಕೊಡಿಸಲಾಗುವುದು. ಮಕ್ಕಳ ವಿದ್ಯಾಭ್ಯಾಸ ಸೇರಿ ಕಾನೂನಾತ್ಮಕವಾಗಿ ದೊರೆಯುವ ಸೌಲಭ್ಯಗಳನ್ನು ನಿಮಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಸಿ ಎಂ.ಪಿ.ಮಾರುತಿ, ತಹಸೀಲ್ದಾರ್‌ಗಳಾದ ಚಾಮರಾಜ ಪಾಟೀಲ್, ಅಮರೇಶ ಬಿರಾದಾರ, ತಾಪಂ ಇಒ ಪ್ರಕಾಶ ವಡ್ಡರ್, ಸಿಪಿಐ ವಿ.ಎಸ್.ಹಿರೇಮಠ, ಮುಖಂಡರಾದ ಸಿದ್ದು ಬಂಡಿ, ಹನುಮಂತಪ್ಪ ತೊಗರಿ, ಜೀವಲೆಪ್ಪ ನಾಯ್ಕ, ಬಸನಗೌಡ ಚಿತ್ತಾಪುರ ಇತರರಿದ್ದರು.