ಲಿಂಗಸುಗೂರು: ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ ತುಂಬು ಗರ್ಭಿಣಿ, ಹೆರಿಗೆಗೆಂದು ಆಸ್ಪತ್ರೆಯಲ್ಲಿ ದಾಖಲಾಗಿ, ಅಲ್ಲಿಂದ ತನ್ನ ಗಂಡ ಮತ್ತು ಅತ್ತೆಯೊಂದಿಗೆ ಸೋಮವಾರ ತಪ್ಪಿಸಿಕೊಂಡು ಅಧಿಕಾರಿಗಳನ್ನು ತಬ್ಬಿಬ್ಬು ಮಾಡಿದ್ದಳು. ಕೊನೆಗೆ ಸ್ವಗ್ರಾಮಕ್ಕೆ ಹೋಗುವಾಗಿ ದಾರಿ ಮಧ್ಯೆ ಹೆರಿಗೆಯಾಗಿ, ಆಶಾ ಕಾರ್ಯಕರ್ತೆಯರಿಂದ ವಿಷಯ ತಿಳಿದ ಅಧಿಕಾರಿಗಳು ಸಮೀಪದ ಆಸ್ಪತ್ರೆಯೊಂದರಲ್ಲಿ ಕ್ವಾರಂಟೈನ್‌ನಲ್ಲಿಟ್ಟಿದ್ದಾರೆ.
ಮಹಾರಾಷ್ಟ್ರದ ಪೂನಾಕ್ಕೆ ಗುಳೆ ಹೋಗಿದ್ದ ತಾಲೂಕಿನ ಹಾಲಬಾವಿ ತಾಂಡಾದ ಲಕ್ಷ್ಮೀಬಾಯಿ, ಹತ್ತು ದಿನಗಳ ಹಿಂದೆ ಗಂಡ, ಅತ್ತೆ, ಇಬ್ಬರು ಮಕ್ಕಳ ಜತೆ ತವರಿಗೆ ಬಂದಿದ್ದರು. ಇವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಈಕೆಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ಅಧಿಕಾರಿಗಳು ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಸ್ಥಳೀಯ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸುವ ಸಿದ್ಧತೆಯಲ್ಲಿದ್ದರು. ಆ ಸಮಯದಲ್ಲಿ ಆಸ್ಪತ್ರೆಯಿಂದ ಗರ್ಭಿಣಿಯು ತನ್ನ ಗಂಡ ಮತ್ತು ಅತ್ತೆ ಜತೆ ತಪ್ಪಿಸಿಕೊಂಡಿದ್ದಳು. ಅಧಿಕಾರಿಗಳು ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಸ್ವಗ್ರಾಮ ಹಾಲಬಾವಿಯತ್ತ ತೆರಳುವಾಗ ಸೋಮವಾರ ರಾತ್ರಿ ಸುಣಕಲ್ ಗ್ರಾಮದ ಬಳಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಶಾ, ಅಂಗನವಾಡಿ ಕಾರ್ಯಕರ್ತತೆಯರಿಂದ ವಿಷಯ ತಿಳಿದ ವೈದ್ಯರು, ಅಧಿಕಾರಿಗಳು ಸಮೀಪದ ಆಸ್ಪತ್ರೆಯೊಂದರಲ್ಲಿ ಐಸೋಲೇಷನ್‌ನಲ್ಲಿ ಬಾಣಂತಿಯನ್ನು ಕ್ವಾರಂಟೈನ್ ಮಾಡಿದ್ದಾರೆ.