ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸವಿದ ಸಚಿವ ವೆಂಕಟರಾವ್ ನಾಡಗೌಡ

ಲಿಂಗಸುಗೂರು: ಪಟ್ಟಣದ ಸಾರಿಗೆ ಬಸ್ ಘಟಕದ ಬಳಿ ನಿರ್ಮಿಸಿದ ನೂತನ ಇಂದಿರಾ ಕ್ಯಾಂಟೀನ್‌ಅನ್ನು ಸಚಿವ ವೆಂಕಟರಾವ್ ನಾಡಗೌಡ ಬುಧವಾರ ಉದ್ಘಾಟಿಸಿದರು.

2017-18ನೇ ಸಾಲಿನ ಪುರಸಭೆ ಎಸ್‌ಎಫ್‌ಸಿ ಉಳಿಕೆ ಮೊತ್ತದ ಅನುದಾನ 12.75 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟೀನ್ ನಿರ್ಮಿಸಲಾಗಿದೆ. ಪ್ರತಿದಿನ 300 ಜನರಿಗೆ ಆಹಾರ ಒದಗಿಸಲಾಗುತ್ತದೆ. ಬೆಳಗ್ಗೆ ಉಪಾಹಾರ 5 ರೂ. ಮತ್ತು ಮಧ್ಯಾಹ್ನ, ರಾತ್ರಿ ಊಟಕ್ಕೆ 10 ರೂ. ನಿಗದಿ ಪಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಕೆ.ಮುತ್ತಪ್ಪ ತಿಳಿಸಿದರು.

ನೂಕುನುಗ್ಗಲು: ಕ್ಯಾಂಟೀನ್ ಉದ್ಘಾಟಿಸಿದ ಬಳಿಕ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ಡಿ.ಎಸ್.ಹೂಲಗೇರಿ, ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಇತರರು ಉಪಾಹಾರ ಸೇವಿಸಿ ನಿರ್ಗಮಿಸಿದ ಬಳಿಕ ಸಾರ್ವಜನಿಕರು ಊಟಕ್ಕಾಗಿ ಮುಗಿಬಿದ್ದರು. ಕೆಲ ಕಾಲ ನೂಕು ನುಗ್ಗಲು ಉಂಟಾಯಿತು. ಅಡುಗೆ ರುಚಿ ಸವಿಯಲು ಆಗಮಿಸಿದ ಮಹಿಳೆಯರನ್ನು ಕೇಳುವವರಿಲ್ಲದಂತಾಗಿ ನೂಕು ನುಗ್ಗಲು ದೃಶ್ಯ ಕಂಡು ಅಲ್ಲಿಂದ ಕಾಲ್ಕಿತ್ತರು.