ಕಡ್ಡೋಣಿ ಗ್ರಾಮದಲ್ಲಿನ ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಲಿಂಗಸುಗೂರು: ರೋಡಲಬಂಡಾ(ತ) ಗ್ರಾಪಂ ವ್ಯಾಪ್ತಿಯ ಕಡ್ಡೋಣಿ ಗ್ರಾಮದಲ್ಲಿ ತಿಂಗಳಿಂದ ಕುಡಿವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ತಾಪಂ ಇಒ ಪ್ರಕಾಶ ವಡ್ಡರರಿಗೆ ಒತ್ತಾಯಿಸಿದರು.

ಗ್ರಾಮದಲ್ಲಿ ಅಂತರ್ಜಲ ಕುಸಿತಗೊಂಡು ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಮದ ಜನತೆ ಗೌಡೂರು, ತವಗ, ರೋಡಲಬಂಡಾ, ಹಟ್ಟಿ ಸೇರಿ ನಾಲ್ಕಾರು ಕಿಮೀ ದೂರದಿಂದ ನೀರು ತರುವ ಪರಿಸ್ಥಿತಿ ಎದುರಾಗಿದೆ. ಗೌಡೂರು ಬಳಿಯ ಬಲದಂಡೆ ನಾಲೆಯಿಂದ ಪೈಪ್‌ಲೈನ್ ಅಳವಡಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನ-ಜಾನುವಾರುಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಮನವಿ ಆಲಿಸಿದ ತಾಪಂ ಇಒ, ಬಲದಂಡೆ ನಾಲೆಯಿಂದ ಗ್ರಾಮಕ್ಕೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಗ್ರಾಮದ ಮಲ್ಲನಗೌಡ, ಭೀಮರಾಯ, ರಾಮನಗೌಡ, ಶಿವಲಿಂಗಪ್ಪ, ಲಾಲಸಾಬ, ಪರ್ವತರಡ್ಡಿ, ಧರ್ಮವ್ವ, ದುರುಗಮ್ಮ, ಜೈನಾಬಿ ಇತರರಿದ್ದರು.