ಲಿಂಗಸುಗೂರು: ರಾಜ್ಯದಲ್ಲಿ ಈಗಾಗಲೇ ವಕ್ಫ್ ಬೋರ್ಡ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ರೈತರ ಒಂದಿಂಚು ಭೂಮಿಯನ್ನು ಬಿಡುವುದಿಲ್ಲ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಲು ಮುಕ್ತ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಸೂಕ್ತ ಕಾನೂನು ಚೌಕಟ್ಟು ತರುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ 192 ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಘೋಷಿಸಿದರೂ ಇಂದಿಗೂ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳು ಉತ್ತಮ ಇಳುವರಿ ಬಂದಿದೆ ಎಂಬ ವರದಿಯಿಂದ ಬಹುತೇಕ ರೈತರಿಗೆ ಫಸಲ್ ಭೀಮಾ ಯೋಜನೆಯ ಲಾಭ ದೊರೆತಿಲ್ಲ. ಕೆಲವೆಡೆ ಪರಿಹಾರ ಹಣ ಬೇರೆಯವರ ಖಾತೆಗೆ ಜಮಾ ಆದ ಕುರಿತು ಕೃಷಿ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೇಂದ್ರಕ್ಕೆ ರಾಜ್ಯ ಬಿಜೆಪಿ ನಾಯಕರು ಒತ್ತಾಯಿಸುತ್ತಿಲ್ಲ. ಕಳೆದ ಕೆಲ ದಿನಗಳ ಹಿಂದೆ ಅಕಾಲಿಕ ಮಳೆ, ಗಾಳಿಗೆ ಭತ್ತದ ಬೆಳೆ ನೆಲಕಚ್ಚಿ ರೈತರ ಪರಿಸ್ಥಿತಿ ಅಯೋಮಯವಾಗಿದೆ ಎಂದರು.
ನಬಾರ್ಡ್ ಯೋಜನೆಯು ಕೃಷಿ ಚಟುವಟಿಕೆಗೆ ಆದ್ಯತೆ ನೀಡದೆ ಶೇ.58 ಅನುದಾನ ಕಡಿತ ಮಾಡಿರುವುದು ಬಹುರಾಷ್ಟ್ರೀಯ ಕಂಪನಿಗಳಿಗೆ ಆದ್ಯತೆ ನೀಡುವ ಹುನ್ನಾರ ನಡೆದಿದೆ. ಸಂಕಷ್ಟಕ್ಕೀಡಾದ ರೈತರಿಗೆ ಆರ್‌ಬಿಐ ಅಥವಾ ನಬಾರ್ಡ್‌ನಿಂದ ಬರ ಪರಿಹಾರ ನೀಡುವ ವ್ಯವಸ್ಥೆಯಾಗಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇವಲ ರಾಜಕೀಯ ಹೋರಾಟಕ್ಕೆ ಸೀಮಿತವಾಗದೆ ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕೆ ಡಿ.8 ರಂದು ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆ ಕರೆದು ರಾಜ್ಯ ಮತ್ತು ಕೇಂದ್ರದ ವಿರುದ್ಧ ಹೋರಾಟ ನಡೆಸಲು ರೂಪರೇಷ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಲಿಂಗಸುಗೂರು ತಾಲೂಕಿನ ಎಪಿಎಂಸಿ ವರ್ತಕರು ರೈತರ ಕೃಷಿ ಉತ್ಪನ್ನ ಖರೀದಿಯಲ್ಲಿ ಮೋಸ ಮಾಡುತ್ತಿರುವ ಕುರಿತು ಎಪಿಎಂಸಿ ಕಾರ್ಯದರ್ಶಿಗೆ ದೂರು ನೀಡಲು ತೆರಳಿದ ರೈತಸಂಘದ ಮುಖಂಡರ ಜತೆ ವರ್ತಕರು ಅನುಚಿತವಾಗಿ ವರ್ತಿಸಿರುವುದು ಸರಿಯಲ್ಲ. ವರ್ತಕರು ಮತ್ತು ರೈತರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವರ್ತಕರ ಬಗ್ಗೆ ಗೌರವವಿದ್ದು, ಕಳೆದ ವರ್ಷ ರೈತರ ಉತ್ಪನ್ನಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತೂಕ ಮಾಡುವುದು, ಕಮಿಷನ್, ಬಾದು ತೆಗೆದ ದೂರಿನನ್ವಯ ಮೋಸ ಮಾಡುವ ವರ್ತಕರಿಗೆ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ರೈತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಮತ್ತು ವರ್ತಕರು ನಡೆದಕೊಳ್ಳಬೇಕೆಂದು ಹೇಳಿದರು.
ರೈತಸಂಘದ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ, ಪ್ರಮುಖರಾದ ಸೂಗೂರಯ್ಯ, ಬಸವರಾಜ ಮಾಲಿಪಾಟೀಲ್, ಮಲ್ಲಣ್ಣ ಗೌಡೂರು, ಚಂದಾವಲಿಸಾಬ, ಲಿಂಗಪ್ಪ, ಅಮರೇಶ ಅಡವಿಬಾವಿ ಇದ್ದರು.