ಕೇಂದ್ರದಿಂದ ಸಿಬಿಐ, ಐಟಿ ದುರುಪಯೋಗ – ಸಚಿವ ಸತೀಶ ಜಾರಕಿಹೊಳಿ ಆರೋಪ

ಲಿಂಗಸುಗೂರು: ಕೇಂದ್ರ ಸರ್ಕಾರ ಸಿಬಿಐ ಮತ್ತು ಐಟಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.

ಲೋಕಸಭಾ ಚುನಾವಣೆ ನಿಮಿತ್ತ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಬಿಜೆಪಿ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ರಚನೆಯಾಗಬೇಕಿದೆ ಎಂದರು.

ರಾಜ್ಯದಲ್ಲಿ ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕೆರೆ ತುಂಬಿಸುವ ಕಾರ್ಯ ಮಾಡಿದೆ. ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ನೀಡಿತ್ತು. ಇಂದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ 17 ಸಾವಿರ ಕೋಟಿ ರೂ. ನೀಡಿದೆ. ಹೀಗೆ ರಾಜ್ಯದ ಜನರಿಗೆ ಅನ್ನಭಾಗ್ಯ, ವಸತಿ, ಉದ್ಯೋಗ, ನೀರಾವರಿ, ರಸ್ತೆ ಸೇರಿ ಮೂಲಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತಿದೆಯೇ ಹೊರತು ಧರ್ಮ, ಹಿಂದುತ್ವದ ಹೆಸರಿನಲ್ಲಿ ಮತ ಕೇಳುವುದು ನಮಗೆ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಅಭ್ಯರ್ಥಿ ಬಿ.ವಿ.ನಾಯಕ, ಶಾಸಕರಾದ ಡಿ.ಎಸ್.ಹೂಲಗೇರಿ, ಪ್ರತಾಪಗೌಡ ಪಾಟೀಲ್, ಹಂಪನಗೌಡ ಬಾದರ್ಲಿ, ಎಂಎಲ್‌ಸಿ ಎನ್.ಎಸ್.ಬೋಸರಾಜು, ಬಸವರಾಜ ಪಾಟೀಲ್ ಇಟಗಿ, ಕೆಪಿಸಿಸಿ ಸದಸ್ಯ ಶರಣಗೌಡ ಬಯ್ಯಪುರ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಇತರರಿದ್ದರು.

ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಕಳೆದ ಐದು ವರ್ಷದಲ್ಲಿ ಕೇಂದ್ರದ ಬಿಜೆಪಿ ಸಾಧನೆ ಶೂನ್ಯ.
|ಅಮರೇಗೌಡ ಪಾಟೀಲ್ ಬಯ್ಯಪುರ ಶಾಸಕ ಕುಷ್ಟಗಿ