ಲಿಂಗಸುಗೂರು: ಆಲಮಟ್ಟಿ ಹಾಗೂ ನಾರಾಯಣಪುರ ಆಣೆಕಟ್ಟೆಯ ಎಲ್ಲ ನಾಲೆಗಳಿಗೆ ಮಾ.31 ರವರೆಗೆ ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡಬೇಕೆಂದು ಕೆಬಿಜೆಎನ್‌ಎಲ್ ಎಂಡಿ ಜಯರಾಮ್‌ರನ್ನು ಶಾಸಕರ ನಿಯೋಗ ಭೇಟಿಯಾಗಿ ಮನವಿ ಮಾಡಿದರು.
ಬೆಂಗಳೂರಿನ ಎಂಡಿ ಕಚೇರಿಯಲ್ಲಿ ಮಂಗಳವಾರ ಭೇಟಿ ಮಾಡಿದ ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ), ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹಾಗೂ ಮಾಜಿ ಶಾಸಕ ಮಾನಪ್ಪ ವಜ್ಜಲ್ ಭೇಟಿ ಮಾಡಿ, ಈಗಾಗಲೇ ನಾಲೆಗಳಿಗೆ ಹರಿಸುತ್ತಿದ್ದ ನೀರು ಸ್ಥಗಿತಗೊಳಿಸಲಾಗಿದೆ. ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ಮಾ.21 ರವರೆಗೆ ನೀರು ಹರಿಸಬೇಕು.
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ಸುರಿದು ಎಲ್ಲ ಆಣೆಕಟ್ಟೆಗಳು ಭರ್ತಿಗೊಂಡಿವೆ. ಕೃಷ್ಣಾ ನದಿ ನೀರು ನಂಬಿದ ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಹಾಕಿದ್ದು, ನೀರು ಸ್ಥಗಿತಗೊಂಡಿದ್ದರಿಂದ ಹಾಳಾಗುವ ಭೀತಿ ಎದುರಾಗಿದೆ. ಆರ್‌ಟಿಪಿಎಸ್ ಹಾಗೂ ತಾಪಮಾನದಿಂದ ಆವಿಯಾಗುವ ನೀರು ಹೊರತುಪಡಿಸಿ 9 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಆಣೆಕಟ್ಟೆಯಲ್ಲಿ ಸಂಗ್ರಹವಿರಲಿದೆ. ಕಾರಣ ಮಾ.31 ರವರೆಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕೆಂದು ಡಿಸಿಎಂ ಗೋವಿಂದ ಕಾರಜೋಳ ಅವರಿಗೂ ನಿಯೋಗ ಒತ್ತಾಯಿಸಿದೆ.