ತೊಗರಿ ಖರೀದಿಸದಿದ್ರೆ ನಿರಶನ ಆರಂಭ

<ಹೈ.ಕ. ರೈತ ಸಂಘ, ಅನ್ನದಾತ ಬ್ರಿಗೇಡ್ ಮುಖಂಡರ ಎಚ್ಚರಿಕೆ> ಎಸಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಕೆ >

ಲಿಂಗಸುಗೂರು: ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ತೆರೆಯಲಾದ ತೊಗರಿ ಖರೀದಿ ಕೇಂದ್ರಗಳ ಮೂಲಕ ರೈತರ ತೊಗರಿ ಖರೀದಿಸದಿದ್ದರೆ ಎಸಿ ಕಚೇರಿ ಮುಂದೆ ತೊಗರಿ ಸುರಿದು ನಿರಶನ ಆರಂಭಿಸಲಾಗವುದು ಎಂದು ಹೈ.ಕ. ರೈತ ಸಂಘ ಹಾಗೂ ಅನ್ನದಾತ ಬ್ರಿಗೇಡ್ ಘಟಕದ ಮುಖಂಡರು ಎಚ್ಚರಿಸಿ ಎಸಿ ಕಚೇರಿ ಸಿಬ್ಬಂದಿಗೆ ಗುರುವಾರ ಮನವಿ ಸಲ್ಲಿಸಿದರು.

ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಆರಂಭಿಸಿದಾಗ ಸರದಿ ಸಾಲಿನಲ್ಲಿ ನಿಂತು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿರುವ ರೈತರ ತೊಗರಿಯನ್ನು ಗ್ರೇಡರ್‌ಗಳು ಗುಣಮಟ್ಟ ಸರಿಯಿಲ್ಲವೆಂದು ತಿರಸ್ಕರಿಸುತ್ತಿವೆ. ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿಸದೆ ಕೇಂದ್ರಗಳನ್ನು ಬಂದ್ ಮಾಡಲಾಗಿದ್ದು, ತೊಗರಿ ವಾಪಸ್ ಒಯ್ಯುವಂತೆ ಅಧಿಕಾರಿಗಳು ರೈತರಿಗೆ ಹೇಳುತ್ತಿದ್ದಾರೆ ಎಂದು ದೂರಿದರು.

ಫೆಡರೇಶನ್ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿದರೆ ಖರೀದಿ ಕೇಂದ್ರಗಳು ಬಂದಾಗಿಲ್ಲ. ಗುಣಮಟ್ಟದ ತೊಗರಿ ಖರೀದಿಸಲು ಸಹಕಾರ ಸಂಘಗಳಿಗೆ ಸೂಚಿಸಲಾಗಿದೆ ಎನ್ನುತ್ತಾರೆ. ಈ ಬಾರಿ ಅಲ್ಪಸ್ವಲ್ಪ ಮಳೆ ಸುರಿದು ತೊಗರಿ ಗುಣಮಟ್ಟ ಸ್ವಲ್ಪ ಕಡಿಮೆ ಬಂದಿದೆ. ಫೆಡರೇಶನ್ ಮತ್ತು ಗ್ರೇಡರ್‌ಗಳ ಮಧ್ಯೆ ರೈತರು ಬಲಿಪಶು ಆಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಮುಂದೆ ರೈತರು ಸಂಗ್ರಹಿಸಿರುವ ತೊಗರಿ ಖರೀದಿಸುವಂತೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಪಾಟೀಲ್, ಅಮರೇಶ ಅಮರಾವತಿ, ನಾಗರಾಜ, ವೀರಭದ್ರಪ್ಪ ಹಳ್ಳಿ, ಮಲ್ಲಪ್ಪ ಹಿರೇಹೆಸರೂರು ಒತ್ತಾಯಿಸಿದರು.