ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಲಿಂಗಸುಗೂರು: ತಾಲೂಕಿನ ಗೊರೇಬಾಳ ತಾಂಡಾ(1)ದ ರೈತ ಪಾಂಡಪ್ಪ ಧರ್ಮಪ್ಪ ಜಾಧವ (48) ಸಾಲಬಾಧೆಗೆ ಮನನೊಂದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಿಂಗಸುಗೂರು ಎಸ್‌ಬಿಐ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ರೈತ ತನ್ನ 7ಎಕರೆ ಜಮೀನಿನಲ್ಲಿ ಶೇಂಗಾ, ಜೋಳ, ಸೂರ್ಯಕಾಂತಿ ಬೆಳೆದಿದ್ದರು. ಬೆಳೆ ನಷ್ಟವಾದ ಹಿನ್ನೆಲೆ ಜಮೀನು ಮತ್ತು ಮನೆ ಅಡ ಇಟ್ಟು ಫೈನಾನ್ಸ್‌ನಲ್ಲಿ ಮತ್ತು ಖಾಸಗಿಯಾಗಿ ಒಟ್ಟು 10 ಲಕ್ಷ ರೂ. ಸಾಲ ಪಡೆದಿದ್ದಾರೆ. ಸಾಲಬಾಧೆಗೆ ಮನನೊಂದು ಜಮೀನಿನ ಪಕ್ಕದ ಸೀಳು ಕಾಲುವೆ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಮೃತನ ಪತ್ನಿ ಚಾಂದಿಬಾಯಿ ಜಾಧವ್ ನೀಡಿದ ದೂರು ಆಧರಿಸಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು

ಸಿಂಧನೂರು : ನಗರದ ನ್ಯೂ ಸತ್ಕಾರ ಹೋಟೆಲ್ ಬಳಿ ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ ಪಿಡಬ್ಲ್ಯುಡಿಕ್ಯಾಂಪ್ ನಿವಾಸಿ ಪಂಪಯ್ಯಸ್ವಾಮಿ(50) ಮೃತಪಟ್ಟಿದ್ದಾನೆ. ಬೈಕ್‌ನಲ್ಲಿ ತೆರಳುತ್ತಿದ್ದಾಗ ಇನ್ನೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ನಗರದ ರಿಲಾಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ಆಟೋ ಪಲ್ಟಿಯಾಗಿ ಅಸ್ಮದ್‌ಪಾಷಾ(22) ಮೃತಪಟ್ಟಿದ್ದಾನೆ. ಅಂಬಾಮಠಕ್ಕೆ ತೆರಳುವ ಸಂದರ್ಭ ಆಟೋ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸಂಚಾರಿ ಠಾಣೆಯಲ್ಲಿ ಪತ್ಯೇಕ ಎರಡು ಪ್ರಕರಣ ದಾಖಲಾಗಿವೆ.