ದಲಿತ ಹಾಸ್ಟೆಲ್ ಪ್ರವೇಶಕ್ಕೆ ಮಿತಿ

 ಪ್ರಕಾಶ್ ಮಂಜೇಶ್ವರ ಮಂಗಳೂರು
ಪರಿಶಿಷ್ಟ ಜಾತಿ, ಪಂಗಡದ ಹಾಸ್ಟೆಲ್‌ಗಳಲ್ಲಿ ಅರ್ಹ ಎಲ್ಲ ಅರ್ಜಿದಾರರಿಗೆ ಇನ್ನು ಪ್ರವೇಶ ನೀಡುವಂತಿಲ್ಲ!
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಇರುವ ಸ್ಥಳಾವಕಾಶ ಮೀರಿ, ಮಂಜೂರಾತಿ ಸಂಖ್ಯೆಗಿಂತ ಹೆಚ್ಚುವರಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಿದರೆ, ಆ ವಿದ್ಯಾರ್ಥಿ ನಿಲಯ/ವಸತಿ ಶಾಲೆಗಳ ಮೇಲ್ವಿಚಾರಕರು, ವಾರ್ಡನ್, ಸೀನಿಯರ್ ವಾರ್ಡನ್, ಸಹಾಯಕ ನಿರ್ದೇಶಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಸೆ.22ರಂದು ಇಲಾಖೆ ಆಯುಕ್ತರು ಹೊರಡಿಸಿದ ಆದೇಶದಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಹಾಸ್ಟೆಲ್‌ಗಳಲ್ಲಿರುವ ವ್ಯವಸ್ಥೆ, ಸ್ಥಳಾವಕಾಶ ಹೊಂದಿಕೊಂಡು ಪ್ರವೇಶಾತಿ ನೀಡಬೇಕಾಗುತ್ತದೆ. ಇಲಾಖೆ ಮಂಜೂರು ಮಾಡಿದ ಸಂಖ್ಯೆಗಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ ಹಾಸ್ಟೆಲ್‌ಗಳಲ್ಲಿ ಕೊಠಡಿ, ಶೌಚಗೃಹ ಮುಂತಾದ ಮೂಲಸೌಕರ್ಯ ಕೊರತೆ ಉಂಟಾಗುತ್ತದೆ. ಈ ಬಗ್ಗೆ ಕೆಲ ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರವೇಶ ಸಂಖ್ಯೆಗೆ ಮಿತಿ ನಿಗದಿಪಡಿಸಿದೆ. ಮಿತಿ ಆಯಾ ವಸತಿ ನಿಲಯಗಳಿಗೆ ಹೊಂದಿಕೊಂಡು ನಿರ್ಧರಿಸಲಾಗುತ್ತದೆ.

ಮಂಜೂರಾತಿ ಸಂಖ್ಯೆ ಹೆಚ್ಚಳಕ್ಕೆ ಪ್ರಸ್ತಾವನೆ: 2018-19ನೇ ಸಾಲಿನಲ್ಲಿ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾತಿ ಸಂಖ್ಯೆಗಿಂತ ಅಧಿಕ ಅರ್ಜಿಗಳು ಸ್ವೀಕೃತಗೊಂಡಿತ್ತು. ಈ ಹಿನ್ನೆಲೆಯಲ್ಲಿ 601 ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಂಡು, ಮಂಜೂರಾತಿ ಸಂಖ್ಯೆ ಹೆಚ್ಚಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಇಲಾಖೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಹಾಸ್ಟೆಲ್‌ಗಳಿದ್ದು, 1,124 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರವೇಶ ಅವಕಾಶವಿದೆ. ಈ ಸಂಖ್ಯೆಯನ್ನು 1,725ಕ್ಕೆ ಏರಿಸಬೇಕು. ಜತೆಗೆ ಹೆಚ್ಚುವರಿ ಕೊಠಡಿ, ಸ್ನಾನಗೃಹ ಮತ್ತು ಶೌಚಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಕೊಡಬೇಕು ಎಂದು ಕೋರಲಾಗಿದೆ.

ನಗರದಲ್ಲಿ ಬೇಡಿಕೆ ಹೆಚ್ಚು: ಶೈಕ್ಷಣಿಕ ಹಬ್ ಎಂದೇ ಗುರುತಿಸಲಾಗಿರುವ ದಕ್ಷಿಣ ಕನ್ನಡ, ಮುಖ್ಯವಾಗಿ ಮಂಗಳೂರು ನಗರದ ಶಿಕ್ಷಣ ಸಂಸ್ಥೆಗಳಿಗೆ ಯಾವತ್ತೂ ಅಧಿಕ ಬೇಡಿಕೆ. 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿರುವ ಅಶೋಕನಗರ ಉರ್ವ ಮಾರಿಗುಡಿ ಸಮೀಪದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಕಳೆದ ವರ್ಷ 239(139 ಅಧಿಕ) ವಿದ್ಯಾರ್ಥಿನಿಯರಿಗೆ ಅವಕಾಶ ಒದಗಿಸಲಾಗಿತ್ತು. 105 ವಿದ್ಯಾರ್ಥಿಗಳಿಗೆ ಅವಕಾಶವಿದ್ದ ಕದ್ರಿ ಪದವು ಹೈಸ್ಕೂಲ್ ಹತ್ತಿರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 134 ಮಂದಿಗೆ ಪ್ರವೇಶ ನೀಡಲಾಗಿತ್ತು. ಇದೇ ಸಂದರ್ಭ, ಗ್ರಾಮೀಣ ಪ್ರದೇಶದ ಕೆಲ ಹಾಸ್ಟೆಲ್‌ಗಳಲ್ಲಿ ಮಂಜೂರಾದ ಸ್ಥಾನಗಳಿಗಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ದಕ್ಷಿಣ ಕನ್ನಡದ ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆಯುವವರಲ್ಲಿ ಶೇ.95 ಹೊರ ಜಿಲ್ಲೆಯವರು. ಬಾಗಲಕೋಟೆ, ಚಿಕ್ಕಮಗಳೂರು, ಹಾಸನ ಮುಂತಾದ ಪ್ರದೇಶಗಳ ವಿದ್ಯಾರ್ಥಿಗಳು ಹೆಚ್ಚು ಇದ್ದಾರೆ.

ಉಡುಪಿಯಿಂದಲೂ ಪ್ರಸ್ತಾವನೆ: ಹಾಸ್ಟೆಲ್ ಪ್ರವೇಶಕ್ಕೆ ಮಿತಿ ಕಡ್ಡಾಯಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ನಾಲ್ಕು ಹೆಚ್ಚುವರಿ ಹಾಸ್ಟೆಲ್ ಆರಂಭಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಉಡುಪಿ ನಗರದಲ್ಲಿ ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳ ಎರಡು ಹಾಸ್ಟೆಲ್ (ತಲಾ 100 ವಿದ್ಯಾರ್ಥಿಗಳ ಸಾಮರ್ಥ್ಯದ) ಹಾಗೂ ಕಾಪು ಮತ್ತು ಹಿರಿಯಡ್ಕದಲ್ಲಿ (ತಲಾ 50 ವಿದ್ಯಾರ್ಥಿಗಳ ಸಾಮರ್ಥ್ಯದ) ತಲಾ ಒಂದು ಹಾಸ್ಟೆಲ್ ಆರಂಭಿಸುವಂತೆ ಮನವಿ ಮಾಡಲಾಗಿದೆ. ಮೆಟ್ರಿಕ್ ಪೂರ್ವದ ವಿದ್ಯಾರ್ಥಿಗಳ ಕೆಲ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಬಲ ಹೆಚ್ಚಿಸುವಂತೆ ವಿನಂತಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಮಂಜೂರಾತಿ ಸಂಖ್ಯೆಗಿಂತ ಅಧಿಕ ಅರ್ಜಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮಂಜೂರಾತಿ ಸಂಖ್ಯೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಪೂರಕ ಮೂಲಸೌಕರ್ಯ ಹೆಚ್ಚಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆಯೂ ಮನವಿ ಸಲ್ಲಿಸಿದ್ದೇವೆ.
– ಡಾ.ಯೋಗೀಶ್, ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ದ.ಕ.

Leave a Reply

Your email address will not be published. Required fields are marked *