ಚಳಿ ಬಿಸಿಲಿನ ರಕ್ಷಣೆಗೆ ಸುಣ್ಣ

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದ್ದಂತೆ ಕೆಲವು ರೈತರು ಅಡಕೆಯಂಥ ಬಹುವಾರ್ಷಿಕ ಮರಗಳಿಗೆ ವಿಶಿಷ್ಟವಾಗಿ ರಕ್ಷಣಾ ಕಾರ್ಯ ನಡೆಸಿ ತಮ್ಮ ಅನುಭವದಿಂದ ಜಾಣತನದ ಹಾದಿ ತುಳಿಯುತ್ತಾರೆ. ಚಳಿಗಾಲದ ಆರಂಭದಲ್ಲಿ ಅತಿಯಾದ ಚಳಿ ಮತ್ತು ಹಗಲಿನ ಬಿರುಬಿಸಿಲಿಂದ ಮರದ ಕಾಂಡದ ಮೇಲ್ಮೈ ರಕ್ಷಿಸಲು ಸುಣ್ಣ ಬಳಿಯುವುದು ಸಹ ಉತ್ತಮ ತಂತ್ರವಾಗಿದೆ.

ರಾತ್ರಿ ಮತ್ತು ಬೆಳಗಿನ ಜಾವದ ಸಮಯದಲ್ಲಿ ಅತಿಯಾದ ಚಳಿ ಮತ್ತು ಇಬ್ಬನಿ ಬೀಳುವಿಕೆಯಿಂದ ಅಡಕೆ ಮರದ ಕಾಂಡದ ಮೇಲ್ಪದರ ಬಿರಿ ಬಿಡುತ್ತದೆ. ಇಂತಹ ಬಿರುಕುಗಳಿಗೆ ಹಗಲಿನ ಸೂರ್ಯನ ಝುಳ ಇನ್ನಷ್ಟು ಘಾಸಿಗೊಳಿಸಿ ಮರದ ನಿರಂತರ ಬೆಳವಣಿಗೆಗೆ ತೊಡಕಾಗುತ್ತದೆ. ಇಂತಹ ಬಿರುಕಿನಲ್ಲಿನ ಸೂರ್ಯನ ಬಿಸಿಲಿನಿಂದ ಕಾಂಡದೊಳಗಿನ ಜೀವಕೋಶ ರಕ್ಷಿಸಲು ಮರ ತಾನು ಹೀರಿದ ನೀರು ಮತ್ತು ಲವಣಾಂಶವನ್ನು ಅತ್ಯಧಿಕವಾಗಿ ಬಳಸುತ್ತದೆ. ಇದರಿಂದ ಫಸಲಿನ ಪ್ರಮಾಣಕ್ಕೆ ಸಹ ಅಡ್ಡ ಪರಿಣಾಮ ಉಂಟಾಗುತ್ತದೆ. ಚಳಿಗಾಲ ಮುಗಿದು ಬೇಸಿಗೆ ಅರಂಭವಾಗುತ್ತಿದ್ದಂತೆ ಅಡಕೆ ಸಸಿಗಳಲ್ಲಿ ಹಿಂಗಾರ ಬಿಟ್ಟು ಮಿಡಿಯಾಗಿ ಬೆಳೆಯಲಾರಂಭಿಸುತ್ತದೆ. ಕಾಂಡದ ಭಾಗ ಬಿರುಕುಗಳಿಂದ ಘಾಸಿಗೊಂಡಿದ್ದರೆ ಫಸಲಿನ ಕಡೆಗೆ ಸಾಗುವ ಪೋಷಕಾಂಶ ಕಡಿಮೆಯಾಗಿ ಕಾಂಡದಲ್ಲಿಯೇ ಬಳಕೆಯಾಗುತ್ತದೆ.

ಅಡಕೆ ಮರದ ಕಾಂಡಗಳಿಗೆ ಸುಣ್ಣ ಮತ್ತು ಫೆವಿಕಾಲ್​ನಂತಹ ಅಂಟನ್ನು ಮಿಶ್ರಣ ಮಾಡಿ ಲೇಪಿಸಲಾಗುತ್ತದೆ. ಸ್ಪಿಂಕ್ಲರ್ ಮೂಲಕ ನೀರಾವರಿ ಒದಗಿಸಿದಾಗ ಅಥವಾ ಜೋರಾದ ಇಬ್ಬನಿ, ಅಕಾಲಿಕ ಮಳೆ ಬಿದ್ದರೂ ಸುಣ್ಣ ಕಾಂಡದಿಂದ ಉದುರುವುದಿಲ್ಲ. ಅಲ್ಲದೆ ಕಾಂಡಕ್ಕೆ ಸುಣ್ಣ ಲೇಪಿಸುವುದರಿಂದ ನಿಧಾನ ಸವೆಯುತ್ತ ಬೇರಿನ ಬುಡಕ್ಕೆ ಸುಣ್ಣ ಇಳಿಯುತ್ತದೆ. ಇದರಿಂದ ಪರೋಕ್ಷವಾಗಿ ಮಣ್ಣಿಗೆ ಸುಣ್ಣದಂಶ ಸೇರಿಸಿದಂತೆ ಆಗುತ್ತದೆ.

ಕಾಂಡಗಳಿಗೆ ಸುಣ್ಣ ಬಳಿಯುವುದರಿಂದ ಬಿಳಿಯ ಬಣ್ಣ ಪ್ರತಿಫಲನಗೊಂಡು ಸೂರ್ಯನ ಶಾಖ ಹೀರದಂತೆಯೂ ಮಾಡುತ್ತದೆ. ಮರದ ಕಾಂಡ ಮತ್ತು ಫಸಲಿನ ಪ್ರಮಾಣದ ಬಗ್ಗೆ ಅನುಭವವಿರುವ ಮಲೆನಾಡು ಮತ್ತು ಬಯಲು ಸೀಮೆಯ ರೈತರು ಅಡಕೆ, ತೆಂಗು ಇತ್ಯಾದಿ ಬಹುವಾರ್ಷಿಕ ಫಸಲಿನ ಮರಗಳ ಕಾಂಡಕ್ಕೆ ಅಂಟುಮಿಶ್ರಿತ ಸುಣ್ಣ ಬಳಿಯುವ ಜಾಣ ತಂತ್ರ ಅನುಸರಿಸುತ್ತಾರೆ.

ಎನ್.ಡಿ.ಹೆಗಡೆ ಆನಂದಪುರಂ

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *