ಫ್ರಾನ್ಸ್​-ಕ್ರೊವೇಷಿಯಾ ಮ್ಯಾಚ್​ನಂತೆ, ಮೋದಿ ಗೆದ್ದರು, ರಾಹುಲ್​ ಜನರ ಹೃದಯ ಕದ್ದರು: ಶಿವಸೇನೆ

ನವದೆಹಲಿ: ಲೋಕಸಭೆಯ ಅವಿಶ್ವಾಸ ಗೊತ್ತುವಳಿಯಲ್ಲಿ ಶುಕ್ರವಾರ ಮೋದಿ ನೇತೃತ್ವದ ಸರ್ಕಾರ ಸಂಖ್ಯಾಬಲ ಪ್ರದರ್ಶಿಸಿರುವುದನ್ನು ಶಿವಸೇನೆ, ಫಿಫಾ ಫುಟ್​ಬಾಲ್​ನ ಫ್ರಾನ್ಸ್​-ಕ್ರೊವೇಷಿಯಾ ಫೈನಲ್​ ಮ್ಯಾಚ್​ಗೆ ಹೋಲಿಕೆ ಮಾಡಿದೆ.

ಫ್ರಾನ್ಸ್​-ಕ್ರೊವೇಷಿಯಾ ಫೈನಲ್​ ಮ್ಯಾಚ್​ನಲ್ಲಿ ಫ್ರಾನ್ಸ್​ ಗೆದ್ದ ಹಾಗೇ ಮೋದಿ ಅವಿಶ್ವಾಸ ಗೊತ್ತುವಳಿಯಲ್ಲಿ ಜಯ ಸಾಧಿಸಿದ್ದಾರೆ. ಆದರೆ, ಕ್ರೊವೇಷಿಯಾ ತಂಡದಂತೆ ರಾಹುಲ್​ ಗಾಂಧಿ ಜನರ ಹೃದಯ ಗೆದ್ದರು ಎಂದು ಶಿವಸೇನೆ ಪ್ರತಿಕ್ರಿಯಿಸಿದೆ.

ರಾಹುಲ್​ ಗಾಂಧಿಯ ಈ ನೂತನ ಅವತಾರವನ್ನು ಎಲ್ಲರೂ ನೋಡಿದ್ದಾರೆ ಮತ್ತು ರಾಹುಲ್​ ನಡೆಗೆ ಶ್ಲಾಘನೆ ವ್ಯಕ್ತಪಡಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಸಂಜಯ್​ ರಾವತ್​ ಹೇಳಿದ್ದಾರೆ.

2018ರ ಫೀಫಾ ಫುಟ್​ಬಾಲ್​ ವಿಶ್ವಕಪ್​ ಫೈನಲ್ಸ್​ನಲ್ಲಿ 4-2ರ ಅಂತರದಿಂದ ಕ್ರೊವೇಷಿಯಾ ಸೋಲನುಭವಿಸಿತ್ತು. ಆದರೆ, ಇದೇ ಮೊದಲ ಬಾರಿಗೆ ಅಂತಿಮ ಘಟ್ಟದವರೆಗೂ ತಲುಪಿದ್ದಕ್ಕೆ ವಿಶ್ವದಾದ್ಯಂತ ಫುಟ್​ಬಾಲ್​ ಅಭಿಮಾನಿಗಳು ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್​)