ಧೋನಿ ಮಿಂಚಿನ ವೇಗದ ಸ್ಟಂಪಿಂಗ್​ಗೆ ತಬ್ಬಿಬ್ಬಾದ ಟಿಮ್ ಸೀಫರ್ಟ್

ಹ್ಯಾಮಿಲ್ಟನ್​: ನ್ಯೂಜಿಲೆಂಡ್​ ಪ್ರವಾಸದಲ್ಲಿ ಚುರುಕಾದ ವಿಕೆಟ್​ ಕೀಪಿಂಗ್​ನಿಂದ ಅಭಿಮಾನಿಗಳ ಮನಗೆದ್ದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಪ್ರವಾಸದ ಕೊನೆಯ ಪಂದ್ಯದಲ್ಲೂ ಮಿಂಚಿನ ಸ್ಟಂಪಿಂಗ್​ ಮಾಡಿ, ವಿಕೆಟ್​ ಕೀಪಿಂಗ್​ನ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ಸ್ಟಂಪ್​ ಮಾಡಿ ರಾಸ್​ ಟೇಲರ್​ ಅವರನ್ನು ಔಟ್​ ಮಾಡಿದ್ದ ಧೋನಿ ಐದನೇ ಪಂದ್ಯದಲ್ಲೂ ತಮ್ಮ ಕೈಚಳಕವನ್ನು ತೋರಿ ಜಿಮ್ಮಿ ನಿಶಾಮ್​ ರನ್ನು ಸ್ಟಂಪ್​ ಮಾಡಿದ್ದರು. ಈಗ ಮೂರನೇ ಟಿ20 ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು 43 ರನ್​ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನ್ಯೂಜಿಲೆಂಡ್​ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಅವರನ್ನು ಸ್ಟಂಪ್​ ಮಾಡಿದರು.

ಕುಲ್​ದೀಪ್​ ಯಾದವ್​ ಬೌಲಿಂಗ್​ನಲ್ಲಿ ಚೆಂಡನ್ನು ಹಿಡಿದ ಧೋನಿ 0.099 ಸೆಕೆಂಡ್​ಗಳಲ್ಲಿ ಸ್ಟಂಪಿಂಗ್​ ಮಾಡಿದರು. ಈ ಮೂಲಕ ಎಲ್ಲ ಆಟಗಾರರಿಗೆ ಐಸಿಸಿ ನೀಡಿದ್ದ ಎಚ್ಚರಿಕೆಯನ್ನು ಟಿಮ್ ಸೀಫರ್ಟ್​ ನೆನಪಿಸಿಕೊಳ್ಳುವಂತೆ ಮಾಡಿದರು.

ಧೋನಿ 300ನೇ ಪಂದ್ಯ

ಇದೇ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. 300ನೇ ಟಿ20 ಪಂದ್ಯವನ್ನಾಡುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಈ ಮೈಲಿಗಲ್ಲು ದಾಟಿದ ಭಾರತದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಸ್​ ಗೇಲ್​, ಶೋಯೆಬ್​ ಮಲಿಕ್​ ಮತ್ತು ಡ್ವೈನ್​ ಬ್ರಾವೋ ಅವರಿರುವ ಎಲೈಟ್​ ಗುಂಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಗುಂಪಿನಲ್ಲಿ ವೆಸ್ಟ್​ಇಂಡೀಸ್​ನ ಆಲ್​​ರ್ರೌಂಡರ್​ ಕಿರಾನ್​ ಪೊಲಾರ್ಡ್​ ಅವರು ಮೊದಲ ಸ್ಥಾನದಲ್ಲಿದ್ದು, ಇವರು 446 ಟಿ20 ಪಂದ್ಯಗಳನ್ನಾಡಿದ್ದಾರೆ. (ಏಜೆನ್ಸೀಸ್​)